RCB vs RR Qualifier 2: ಪಂದ್ಯದ ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ನಾಳೆ ( ಮೇ 27 ) ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ 9 ಪಂದ್ಯಗಳಲ್ಲಿ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಲೀಗ್ ಹಂತ ಮುಕ್ತಾಯದ ಸಮಯಕ್ಕೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು ಹಾಗೂ 8 ಪಂದ್ಯಗಳಲ್ಲಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಯಶಸ್ವಿಯಾಗಿ ಪ್ಲೇಆಫ್ ಪ್ರವೇಶಿಸಿದ್ದವು.
ಪ್ಲೇಆಫ್ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಿದ ರಾಜಸ್ಥಾನ್ ರಾಯಲ್ಸ್ ಸೋಲುವುದರ ಮೂಲಕ ಕ್ವಾಲಿಫೈಯರ್ ಎರಡನೇ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿದ್ದರೆ, ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಇನ್ನು ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಯಶಸ್ವಿಯಾಗಿ ಫೈನಲ್ ಪಂದ್ಯ ತಲುಪಲಿದ್ದರೆ, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಹೀಗಾಗಿ ಎರಡೂ ತಂಡಗಳಿಗೂ ಸಹ ಈ ಪಂದ್ಯ ಮಹತ್ವದ್ದಾಗಿದ್ದು, ಇತ್ತಂಡಗಳೂ ಸಹ ಗೆಲ್ಲುವತ್ತ ಚಿತ್ತ ನೆಟ್ಟಿವೆ. ಇನ್ನು ಈ ಎರಡೂ ತಂಡಗೂ ಈ ಬಾರಿಯ ಟೂರ್ನಿಯಲ್ಲಿ ಮುಖಾಮುಖಿಯಾಗಲಿರುವ ಮೂರನೇ ಪಂದ್ಯ ಇದಾಗಿದ್ದು, ಲೀಗ್ ಹಂತದಲ್ಲಿ ಇತ್ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿದ್ದವು. ಹಾಗೂ ಈ ಎರಡು ಪಂದ್ಯಗಳಲ್ಲಿ ಇತ್ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆದ್ದಿದ್ದವು. ಸದ್ಯ ಇತ್ತಂಡಗಳ ನಡುವೆ ನಡೆಯಲಿರುವ ಈ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಯಾವ ತಂಡ ಗೆದ್ದು ಫೈನಲ್ ಘಟ್ಟ ತಲುಪಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಡಲಿದೆ ಎಂಬ ಕುತೂಹಲ ಹೆಚ್ಚಾಗಿದ್ದು, ಪಂದ್ಯದಲ್ಲಿ ಕಣಕ್ಕಿಳಿಯಲಿರುವ ತಂಡಗಳು ಹೇಗಿರಲಿವೆ ಹಾಗೂ ಪಿಚ್ ವರದಿ ಮತ್ತು ಹವಾಮಾನ ವರದಿ ಹೇಗಿರಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಪಂದ್ಯದ ಮಾಹಿತಿ
ಟಾಟಾ ಐಪಿಎಲ್‌ನ ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 27ರ ಶುಕ್ರವಾರದಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

ಪಿಚ್ ವರದಿ ಮತ್ತು ಹವಾಮಾನ ವರದಿ
ಹವಾಮಾನ ವರದಿ:
ಪಂದ್ಯದ ದಿನದಂದು ತಾಪಮಾನವು 48% ತೇವಾಂಶ ಮತ್ತು ಗಂಟೆಗೆ 18-22 ಕಿ.ಮೀ ಗಾಳಿಯ ವೇಗದೊಂದಿಗೆ 36° ಸೆಲ್ಸಿಯಸ್‌ನಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ ಹಾಗೂ ಆಟದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ.
ಪಿಚ್ ವರದಿ:
ಅಹ್ಮದಾಬಾದ್ ಕ್ರಿಕೆಟ್ ಕ್ರೀಡಾಂಗಣದ ಕೆಂಪು ಮಣ್ಣಿನ ಪಿಚ್‌ಗಳು ಬೇಗ ಒಣಗುವ ಲಕ್ಷಣಗಳನ್ನು ಹೊಂದಿದ್ದು, ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಸಹಾಯಕವಾಗಿರಲಿವೆ. ಇನ್ನು ಹಿಂದಿನ ಪಂದ್ಯಗಳನ್ನು ಗಮನಿಸಿದರೆ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ವಿಕೆಟ್ ಕಬಳಿಸಲಿದ್ದು, ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಬಾರಿಸಲು ತಿಣುಕಾಡಬಹುದು. ಈ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯಗಳು ಕಡಿಮೆ ರನ್ ಮೊತ್ತದ ಪಂದ್ಯಗಳಾಗಿದ್ದು, ದೊಡ್ಡ ಬೌಂಡರಿಗಳಾಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಅಬ್ಬರಿಸುವುದೂ ಕೂಡ ಕಷ್ಟ.

ಸಂಭಾವ್ಯ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ / ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications