
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿದ್ದ ಎಂಎಸ್ ಧೋನಿ ನಾಯಕತ್ವ ತ್ಯಜಿಸಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿದೆ. ಇನ್ನು ರವೀಂದ್ರ ಜಡೇಜಾ ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೂಡ ಫ್ರಾಂಚೈಸಿ ಅಧಿಕೃತವಾಗಿ ಘೋಷಣೆ ಮಾಡಿದೆ.
2008ರಲ್ಲಿ ಐಪಿಎಲ್‌ನ ಆರಂಭಿಕ ಆವೃತ್ತಿಯ ಆರಂಭಕ್ಕೂ ಮುನ್ನ ಎಂಎಸ್ ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಐಕಾನ್ ಆಟಗಾನನ್ನಾಗಿ ಆಯ್ಕೆ ಮಾಡಿತ್ತು. ಅದಾದ ಬಳಿಕ 12 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಎಂಎಸ್ ಧೋನಿ ಸಿಎಸ್‌ಕೆ ತಂಡವನ್ನು 4 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ತಂಡ ಎಂಬ ಹೆಗ್ಗಳಿಕೆ ಕೂಡ ಸಿಎಸ್‌ಕೆ ಪಡೆಗಿದೆ. ತಾನು ಭಾಗವಹಿಸಿದ ಟೂರ್ನಿಯಲ್ಲಿ ಒಂದು ಆವೃತ್ತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಯಲ್ಲಿಯೂ ಸಿಎಸ್‌ಕೆ ಪ್ಲೇಆಫ್‌ಗೆ ಪ್ರವೇಶ ಪಡೆದಿರುವುದು ಧೋನಿ ನಾಯಕತ್ವದ ಹೆಗ್ಗಳಿಕೆಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈ ಬೆಳವಣಿಗೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಟ್ವೀಟ್‌ನಲ್ಲಿ ಸಿಎಸ್‌ಕೆ "ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಎಂಎಸ್ ಧೋನಿ ಹಸ್ತಾಂತರಿಸಲು ಎಂಎಸ್ ಧೋನಿ ನಿರ್ಧರಿಸಿದ್ದಾರೆ. ರವೀಂದ್ರ ಜಡೇಜಾ ಅವರನ್ನು ಸಿಎಸ್‌ಕೆ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ" ಎಂದು ಪ್ರಕಟಣೆಯಲ್ಲಿ ಸಿಎಸ್‌ಕೆ ತಿಳಿಸಿದೆ.
"ರವೀಂದ್ರ ಜಡೇಜಾ 2012ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿದ್ದು ಫ್ರಾಂಚೈಸಿಯನ್ನು ಮುನ್ನಡೆಸಲಿರುವ ಕೇವಲ ಮೂರನೇ ಆಟಗಾರನಾಗಲಿದ್ದಾರೆ. ಧೋನಿ ಈ ಆವೃತ್ತಿ ಹಾಗೂ ಮುಂದೆಯೂ ಸಿಎಸ್‌ಕೆಯನ್ನು ಪ್ರತಿನಿಧಿಸಲಿದ್ದಾರೆ" ಎಂದು ಸಿಎಸ್‌ಕೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಪಡೆ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್ ಹಾಗೂ ಮೊಯೀನ್ ಅಲಿ ಅವರನ್ನು ಸಿಎಸ್‌ಕೆ ರೀಟೈನ್ ಮಾಡಿಕೊಂಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ಎಂಎಸ್ ಧೋನಿ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಅಂಬಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮಾರ್ಜಿತ್ ಸಿಂಗ್, ಸಿಮಾರ್ಜಿತ್ ಸಿಂಗ್ ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ