
ಐಪಿಎಲ್ 2022ರ ಅತಿ ರೋಚಕತೆಯಿಂದ ಕೂಡಿದ ಮುಂಬೈ ಮತ್ತು ಚೆನ್ನೈ ಪಂದ್ಯದಲ್ಲಿ ಚೆನ್ನೈ ತಂಡ ಜಯದ ನಗು ಬೀರಿದೆ. ಮಾಜಿ ನಾಯಕನ ತಾಳ್ಮೆಯ ಪ್ರದರ್ಶನದಿಂದ ಮೂರು ವಿಕೆಟ್‌ಗಳ ಜಯಗಳಿಸಲು ಸಿಎಸ್‌ಕೆಗೆ ಸಾಧ್ಯವಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಮಾಜಿ ನಾಯಕ ಎಂಎಸ್‌ಡಿ ಚೆನ್ನೈ ಫ್ರಾಂಚೈಸಿಗೆ ಗೆಲವು ಒದಗಿಸಿದ್ದಾರೆ. ಅತ್ಯುತ್ತಮ ಮ್ಯಾಚ್ ಪಿನಿಷರ್ ಖ್ಯಾತಿಯ ಧೋನಿಯ ಅಂತಿಮ ಓವರ್ ವರೆಗೂ ಮ್ಯಾಚ್ ತೆಗೆದುಕೊಂಡು ಹೋಗಿ ತಮ್ಮ ವಿಭಿನ್ನ ಶೈಲಿಯಲ್ಲಿ ಮ್ಯಾಚ್‌ಗೆ ಸುಖಾಂತ್ಯ ನೀಡಿದ್ದಾರೆ.
ಯಾರೇ ಔಟ್ ಆದರು ಧೋನಿ ಒಬ್ಬ ಕ್ರೀಸ್‌ನಲ್ಲಿದ್ದರೇ ಸಾಕು, ಖಂಡಿತವಾಗಿ ಮ್ಯಾಚ್‌ಗೆಲ್ಲುತ್ತೆವೆ ಎನ್ನುವ ಅಭಿಮಾನಿಗಳ ಭರವಸೆಯನ್ನು ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ 16 ರನ್ ಗಳಿಸುವ ಮೂಲಕ ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಕೂಲ್ ಫಿನಿಶರ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಂತರ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಕೊನೆಯ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿತ್ತು, ಮೊದಲ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ಅವರ ವಿಕೆಟ್ ಕಳೆದುಕೊಂಡ ಸಿಎಸ್‌ಕೆ ಓವರ್ ನ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಬ್ರಾವೋ ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಹೀಗಾಗಿ ಕೊನೆಯ ನಾಲ್ಕು ಎಸೆತಗಳಲ್ಲಿ ಧೋನಿ 16 ರನ್ ಗಳಿಸ ಬೇಕಾಗಿತ್ತು. ಅನುಭವಿ ಬ್ಯಾಟರ್ ಮುಂದಿನ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆದರು, ನಂತರದಲ್ಲಿ 2 ಎಸೆತಗಳಲ್ಲಿ 6ರನ್ ಅವಶ್ಯಕತೆ ಇದ್ದಾಗ ಐದನೇ ಎಸೆತದಲ್ಲಿ ವೇಗವಾಗಿ ಎರಡು ರನ್ ಕಲೆಹಾಕಿದರು. ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಧೋನಿ, ಮೂರು ವಿಕೆಟ್‌ಗಳಿಂದ ತಂಡವನ್ನು ಗೆಲ್ಲಿಸಿದರು.

ಗೆಲುವಿನ ನಂತರ ಧೋನಿಯೊಂದಿಗೆ ಮುಂಬೈ ತಂಡದ ಯುವ ಆಟಗಾರ ಹೃತಿಕ್ ಶೋಕೀನ್ ಮಾತನಾಡುತ್ತಿರುವುದು ಕಂಡುಬಂದಿತು. ನಂತರ ಮೈದಾನದಿಂದ ಡಗೌಟ್ ನತ್ತ ತೆರಳುತ್ತಿದ್ದ ಧೋನಿ ಬಳಿ ಬಂದ ನಾಯಕ ಜಡೇಜಾ, ಧೋನಿಯ ನಂಬಲಾಗದ ಫಿನಿಶಿಂಗ್ ಕೌಶಲ್ಯಕ್ಕಾಗಿ ತೆಲೆ ಭಾಗಿ ನಮಸ್ಕರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ತಂಡದ ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತ್ತು. ಬ್ಯಾಟಿಂಗ್ ತಂಡದ ಮೇಲೆ ಕೊನೆಯ ವರೆಗೂ ಒತ್ತಡವನ್ನು ಇರಿಸಿಕೊಳ್ಳಲು ಮುಂಬೈ ತಂಡ ಉತ್ತಮವಾಗಿ ಡೆತ್ ಓವರ್‌ಗಳಲ್ಲಿ ಬೌಲ್ ಮಾಡಿದರು. ಆದಾಗ್ಯೂ, ಧೋನಿ ಕ್ರಿಸ್‌ನಲ್ಲಿ ಸ್ಥಿರವಾಗಿದ್ದರಿಂದ ಮುಂಬೈ ತಂಡ ಗೆಲ್ಲಲು ಸಾಧ್ಯವಾಗದೇ, ಮುಂಬೈ ಏಳು ಪಂದ್ಯಗಳಲ್ಲಿ ಏಳು ಸೋಲುಗಳೊಂದಿಗೆ ಪ್ಲೇಆಫ್‌ನ ರೇಸ್‌ನಿಂದ ಬಹುತೇಕ ಹೊರಗಾಗಿದೆ.
ಇದಕ್ಕೂ ಮೊದಲು, ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ಸಹಾಯದಿಂದ ಮುಂಬೈ ತಂಡ 155 ರನ್‌ಗಳಿಸಲು ಶಕ್ತವಾಯಿತು. ಆರಂಭಿಕ ಓವರ್‌ನಲ್ಲೇ ಎರಡು ವಿಕೆಟ್ ಉರುಳಿಸಿದ ಸಿಎಸ್‌ಕೆ ಬೌಳರ್ ಮುಖೇಶ್ ಚೌಧರಿ ಮೂರು ವಿಕೆಟಗಳನ್ನು ಪಡೆದ್ರೆ, ಬ್ರಾವೋ ಎರಡು ವಿಕೆಟ್ ಪಡೆದರು. ಮಿಚಲ್ ಸ್ಯಾಂಟ್ನರ್, ತಿಕ್ಷಣ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಅದ್ಭುತ ಬೌಲಿಂಗ್ ಮಾಡಿದರು.