ಟೂರ್ನಿ ಮಧ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ರವೀಂದ್ರ ಜಡೇಜಾ!; ಕಾರಣ ಬಹಿರಂಗ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರ ಬದಲಾವಣೆ ಎರಡನೇ ಬಾರಿಗೆ ನಡೆದಿದೆ. ಹೌದು, ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಆರಂಭವಾಗಲು ಇನ್ನೆರಡು ದಿನಗಳು ಬಾಕಿ ಇದೆ ಎನ್ನುವಾಗ ಎಂ ಎಸ್ ಧೋನಿ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದರು.
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದಡಿಯಲ್ಲಿ ನಾಲ್ಕನೇ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬೃಹತ್ ಹಾಗೂ ಪ್ರಯೋಗಾತ್ಮಕ ಬದಲಾವಣೆಗೆ ಯಾಕೆ ಕೈ ಹಾಕಿತು ಎಂಬ ಆಶ್ಚರ್ಯ ಎಲ್ಲರಲ್ಲಿಯೂ ಮೂಡಿತ್ತು. ಇನ್ನು ಎಂಎಸ್ ಧೋನಿ ಉತ್ತರಾಧಿಕಾರಿಯಾಗಿ ನಾಯಕತ್ವದ ಜವಾಬ್ದಾರಿ ಹೊತ್ತ ರವೀಂದ್ರ ಜಡೇಜಾ ಹೇಳಿಕೊಳ್ಳುವಂತ ಯಶಸ್ಸು ಸಾಧಿಸಲಿಲ್ಲ. ಟೂರ್ನಿಯ ಆರಂಭದಲ್ಲಿಯೇ ನಾಲ್ಕು ಸಾಲು ಸಾಲು ಸೋಲುಗಳನ್ನು ಕಂಡು ಮುಗ್ಗರಿಸಿತ್ತು.
ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 6 ಪಂದ್ಯಗಳಲ್ಲಿ ಸೋತು 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಹೀಗೆ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚು ಕಂಡು ಪ್ಲೇಆಫ್ ಪ್ರವೇಶಿಸುವುದರಲ್ಲಿ ಅನುಮಾನ ಮೂಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ ಇದೀಗ ಮತ್ತೆ ಎಂಎಸ್ ಧೋನಿಗೆ ಹಸ್ತಾಂತರಿಸಿದ್ದಾರೆ. ಹಾಗೂ ಈ ವಿಷಯವನ್ನು ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದೆ.

ನಾಯಕತ್ವದಿಂದ ಕೆಳಗಿಳಿಯಲು ಇದೇ ಕಾರಣ
ಇನ್ನು ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಎಂಎಸ್ ಧೋನಿಗೆ ಹಸ್ತಾಂತರಿಸಿರುವ ವಿಷಯವನ್ನು ತಿಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇದೇ ಸಮಯದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನೂ ಸಹ ತಿಳಿಸಿದೆ. ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ರವೀಂದ್ರ ಜಡೇಜಾ ಒತ್ತಡ ಹೆಚ್ಚಾದ ಕಾರಣ ನಾಯಕತ್ವವನ್ನು ಧೋನಿಗೆ ಹಸ್ತಾಂತರಿಸಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ರವೀಂದ್ರ ಜಡೇಜಾ ತನ್ನ ಆಟದತ್ತ ಹೆಚ್ಚು ಗಮನ ಹರಿಸಲು ಈ ನಿರ್ಧಾರವನ್ನು ಕೈಗೊಂಡಿದ್ದು, ಎಂಎಸ್ ಧೋನಿ ಬಳಿ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದಾರೆ. ಜಡೇಜಾರ ಈ ಮನವಿಗೆ ಸ್ಪಂದಿಸಿದ ಎಂಎಸ್ ಧೋನಿ ನಾಯಕತ್ವವನ್ನು ಸ್ವೀಕರಿಸಿದ್ದಾರೆ.

ನಾಯಕತ್ವ ಹೊತ್ತ ನಂತರ ಜಡೇಜಾ ಪ್ರದರ್ಶನ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕತ್ವ ಹೊತ್ತ ಬಳಿಕ 8 ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ ಕೇವಲ 112 ರನ್ ಕಲೆಹಾಕಿದ್ದಾರೆ ಹಾಗೂ ರವೀಂದ್ರ ಜಡೇಜಾ ಗಳಿಸಿರುವ ಗರಿಷ್ಟ ರನ್ ಕೇವಲ 26. ಇನ್ನು ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 26 ಓವರ್ ಬೌಲಿಂಗ್ ಮಾಡಿರುವ ಜಡೇಜಾ ಕಬಳಿಸಿರುವುದು ಕೇವಲ 5 ವಿಕೆಟ್. ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಆಲ್ ರೌಂಡರ್ ಆಗಿ ಮಿಂಚಿದ್ದ ರವೀಂದ್ರ ಜಡೇಜಾ ಈ ಬಾರಿ ನಾಯಕತ್ವ ಹೊತ್ತ ನಂತರ ನೆಲಕಚ್ಚಿದ್ದಾರೆ ಎಂಬುದು ಅವರ ಅಂಕಿಅಂಶಗಳಲ್ಲೇ ತಿಳಿಯಲಿದೆ.

2021ರಲ್ಲಿ ಜಡೇಜಾ ಪ್ರದರ್ಶನ
ಈ ಬಾರಿಯ ಟೂರ್ನಿಯಲ್ಲಿ ಮಂಕಾಗಿರುವ ರವೀಂದ್ರ ಜಡೇಜಾ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 13 ವಿಕೆಟ್ ಪಡೆದಿದ್ದರು ಹಾಗೂ 227 ರನ್ ಗಳಿಸಿದ್ದರು. ಹೀಗೆ ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ತಂಡಕ್ಕೆ ಅನಿವಾರ್ಯವಿದ್ದ ಸಂದರ್ಭಗಳಲ್ಲಿ ನೆರವಾಗಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇನ್ನು ಸದ್ಯ ಟೂರ್ನಿ ಮಧ್ಯ ನಾಯಕತ್ವ ತ್ಯಜಿಸಿರುವ ರವೀಂದ್ರ ಜಡೇಜಾ ಉಳಿದ ಪಂದ್ಯಗಳಲ್ಲಿ ಓರ್ವ ಆಟಗಾರನಾಗಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications