ಜಡೇಜಾ ಟೂರ್ನಿಯಿಂದ ಹೊರಬಿದ್ದದ್ದು ಕೇವಲ ಗಾಯದ ಸಮಸ್ಯೆಯಿಂದಲ್ಲ; ಸಿಎಸ್‌ಕೆಯಲ್ಲಿ ಇಬ್ಬರ ಮಧ್ಯೆ ಒಳಜಗಳದ ಹೊಗೆ!

ಕಳೆದ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿಯಲ್ಲಿ ಅಕ್ಷರಶಃ ಮಂಕಾಗಿದೆ. ಸತತ ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಈಗಾಗಲೇ ಬಹುತೇಕ ಕಳೆದುಕೊಂಡಿದ್ದು, ಇದೀಗ ತಂಡದ ಪ್ರಮುಖ ಆಟಗಾರ ರವೀಂದ್ರ ಜಡೇಜಾ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಗುಳಿದದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಎಂಎಸ್ ಧೋನಿ ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದರು. ಆದರೆ ರವೀಂದ್ರ ಜಡೇಜಾ ನಾಯಕತ್ವದಡಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ನೀಡದ ಕಾರಣ ಜಡೇಜಾ ಟೂರ್ನಿಯ ಮಧ್ಯದಲ್ಲಿಯೇ ನಾಯಕತ್ವವನ್ನು ತ್ಯಜಿಸಿ ಮತ್ತೆ ಎಂಎಸ್ ಧೋನಿಗೆ ಹಸ್ತಾಂತರಿಸಿದರು. ಹೀಗೆ ಟೂರ್ನಿ ಮಧ್ಯ ಮತ್ತೊಮ್ಮೆ ನಾಯಕತ್ವದ ಬದಲಾವಣೆಯಾದ ನಂತರ ಧೋನಿ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದು ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋತು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿದೆ.
ನಾಯಕತ್ವದಿಂದ ಕೆಳಗಿಳಿದ ನಂತರ ನಡೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರವೀಂದ್ರ ಜಡೇಜಾ ನಂತರ ಇತ್ತೀಚೆಗಷ್ಟೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದರು. ಈ ಪಂದ್ಯ ಮುಗಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲು ಸಿದ್ಧವಾಗುತ್ತಿದ್ದು, ಇದೇ ಸಮಯಕ್ಕೆ ಗಾಯದ ಸಮಸ್ಯೆಗೊಳಗಾಗಿರುವ ರವೀಂದ್ರ ಜಡೇಜಾ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದದ್ದು ಹಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನು ಮೂಡಿಸಿದೆ. ಇನ್ನು ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಗುಳಿಯಲು ಕಾರಣ ಕೇವಲ ಗಾಯದ ಸಮಸ್ಯೆ ಮಾತ್ರವಲ್ಲ, ತಂಡದಲ್ಲಿ ಉಂಟಾದ ವೈಮನಸ್ಸು ಮತ್ತು ಒಳಜಗಳಗಳೂ ಸಹ ಕಾರಣ ಎಂಬ ಮಾತುಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿವೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ..

ಇಬ್ಬರ ನಡುವೆ ಒಳಜಗಳ!
'ರವೀಂದ್ರ ಜಡೇಜಾಗೆ ಗಾಯದ ಸಮಸ್ಯೆ ಇರುವುದು ನಿಜ, ಅದರ ಕುರಿತು ಯಾವುದೇ ಅನುಮಾನ ಬೇಡ. ಅದರ ಜೊತೆಗೆ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಜಡೇಜಾ ನಾಯಕತ್ವದಿಂದ ಕೆಳಗಿಳಿದ ನಂತರ ಯಾವುದೂ ಸಾಮಾನ್ಯ ರೀತಿಯಲ್ಲಿಲ್ಲ. ಜಡೇಜಾ ಮಂಕಾಗಿದ್ದು, ತಮ್ಮ ಹಿಂದಿನ ಉತ್ಸಾಹವನ್ನು ಕಳೆದುಕೊಂಡಿದ್ದಾರೆ' ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಲ್ಲ ಮೂಲವೊಂದು ಮಾಹಿತಿ ನೀಡಿದೆ.

ಒಳಜಗಳ ಇರುವುದು ನಿಜ ಎನ್ನುತ್ತಿದೆ ಈ ಬದಲಾವಣೆ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರವೀಂದ್ರ ಜಡೇಜಾ ನಡುವೆ ಎಲ್ಲವೂ ಸರಿಯಲ್ಲ, ಒಳ ಜಗಳಗಳಿವೆ ಎಂಬ ವಿವಾದಕ್ಕೆ ಪುಷ್ಟಿ ಕೊಟ್ಟದ್ದು ಚೆನ್ನೈ ಸೂಪರ್ ಕಿಂಗ್ಸ್‌ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ. ಹೌದು, ಈ ರೀತಿಯ ಒಂದು ಸುದ್ದಿ ಹರಿದಾಡುತ್ತಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರವೀಂದ್ರ ಜಡೇಜಾ ಅವರನ್ನು ಅನ್ ಫಾಲೋ ಮಾಡಿದೆ. ಇಷ್ಟು ದಿನ ರವೀಂದ್ರ ಜಡೇಜಾ ಅವರನ್ನು ಹಿಂಬಾಲಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಏಕಾಏಕಿ ಅನ್ ಫಾಲೋ ಮಾಡಿದ್ದು, ಒಳಜಗಳಗಳು ಇರುವುದು ನಿಜ ಎಂಬ ಭಾವ ಮೂಡುವಂತೆ ಮಾಡಿದೆ.

ಟೂರ್ನಿಯಲ್ಲಿ ಜಡೇಜಾ ಫ್ಲಾಪ್ ಶೋ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ 8 ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕಿಳಿದು, ಉಳಿದ ಪಂದ್ಯಗಳಲ್ಲಿ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಇನ್ನು ಒಟ್ಟು ಹತ್ತು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿರುವ ರವೀಂದ್ರ ಜಡೇಜಾ ಕೇವಲ 116 ರನ್ ಕಲೆಹಾಕಿದ್ದಾರೆ. ಇನ್ನು ಆಲ್‌ರೌಂಡರ್ ಆಟಗಾರನಾದ ಜಡೇಜಾ ಕೇವಲ 5 ವಿಕೆಟ್ ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications