ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಜಡೇಜಾ ಔಟ್?: ಉತ್ತರ ಕೊಟ್ಟ ಸಿಎಸ್‌ಕೆ ಸಿಇಒ ಹೇಳಿದ್ದಿಷ್ಟು

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದು, ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸೋತ ಕಾರಣ ಇದೀಗ ಪ್ಲೇಆಫ್ ಪ್ರವೇಶ ಪಡೆದುಕೊಳ್ಳುವ ಅವಕಾಶವನ್ನು ಬಹುತೇಕ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ದೊಡ್ಡ ಮಟ್ಟದ ಹಿನ್ನಡೆಗೆ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದೇ ಪ್ರಮುಖ ಕಾರಣ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆಗಳು ಇದರ ಸುತ್ತ ಹರಿದಾಡುತ್ತಿವೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವುದಕ್ಕೆ ಕೆಲ ಸಮಯ ಇರುವಾಗ ಎಂಎಸ್ ಧೋನಿ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಆದರೆ ಜಡೇಜಾ ನಾಯಕತ್ವದಲ್ಲಿ 8 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಮಾತ್ರ ಗೆಲುವನ್ನು ಕಂಡು ಹೀನಾಯ ಹಂತದಲ್ಲಿತ್ತು. ಹೀಗೆ ಸಾಲು ಸಾಲು ಸೋಲನ್ನು ಕಂಡ ನಂತರ ನಾಯಕತ್ವವನ್ನು ಮರಳಿ ಎಂಎಸ್ ಧೋನಿಗೆ ಹಸ್ತಾಂತರಿಸಿ ಆಟಗಾರನಾಗಿ ಮುಂದುವರೆದರು.
ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನ್ನು ಕಂಡ ಚೆನ್ನೈ ಸೂಪರ್ ಕಿಂಗ್ಸ್ ನಂತರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ತನ್ನ ಪ್ಲೇ ಆಫ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಕೊಂಡಿತು. ಇನ್ನು ನಾಯಕತ್ವ ತ್ಯಜಿಸಿದ ನಂತರ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜಡೇಜಾ ಕಳೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಗಾಯದ ಸಮಸ್ಯೆಯ ಕಾರಣ ಹೊರಗುಳಿದರು. ಹೀಗೆ ಪಂದ್ಯದಿಂದ ಹೊರಗುಳಿದಿದ್ದ ಜಡೇಜಾ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಘೋಷಿಸಿತು. ಈ ಬೆಳವಣಿಗೆಗಳ ಬೆನ್ನಲ್ಲೇ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ನಡುವೆ ಮನಸ್ತಾಪ ಉಂಟಾದ ಕಾರಣ ಜಡೇಜಾ ಟೂರ್ನಿಯಿಂದ ಹೊರಗುಳಿದಿದ್ದಾರೆ ಎನ್ನುವ ಸುದ್ದಿಗಳೂ ಸಹ ಹರಿದಾಡಿದವು. ಅಷ್ಟೇ ಅಲ್ಲದೇ ಜಡೇಜಾ ಮುಂದಿನ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದು ಅನುಮಾನ ಎಂಬ ಮಾತುಗಳೂ ಸಹ ಹರಿದಾಡಿದವು. ಈ ಕುರಿತಾಗಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿದ್ದು, ಈ ಕೆಳಕಂಡಂತೆ ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ವರ್ಷ ಜಡೇಜಾ ಸಿಎಸ್‌ಕೆ ಪರ ಕಣಕ್ಕಿಳಿಯುತ್ತಾರಾ?
ಜಡೇಜಾ ಮುಂದಿನ ವರ್ಷದ ನಮ್ಮ ಯೋಜನೆಯಲ್ಲಿಯೂ ಇದ್ದಾರೆ ಎಂದಿರುವ ಕಾಶಿ ವಿಶ್ವನಾಥನ್ ಜಡ್ಡು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ಜಡೇಜಾ ಕುರಿತು ಹರಿದಾಡುತ್ತಿರುವ ಸುದ್ದಿಗಳಾವುದೂ ನಿಜವಲ್ಲ ಜಡೇಜಾ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ನಡುವೆ ಯಾವುದೇ ಮನಸ್ತಾಪಗಳಿಲ್ಲ ಎಂದು ಕಾಶಿ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.

ಜಡೇಜಾ ಅನ್‌ಫಾಲೋ ಬಗ್ಗೆ ಕಾಶಿ ವಿಶ್ವನಾಥನ್ ಹೇಳಿದ್ದಿಷ್ಟು
ಜಡೇಜಾ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಡೇಜಾರನ್ನು ಅನ್‌ಫಾಲೋ ಮಾಡಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಹೀಗಾಗಿ ಜಡೇಜಾ ಮುಂದಿನ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದು ಅನುಮಾನ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಈ ಕುರಿತು ಪ್ರತಿಕ್ರಿಯಿಸಿರುವ ಕಾಶಿ ವಿಶ್ವನಾಥನ್ ಸಾಮಾಜಿಕ ಜಾಲತಾಣದಲ್ಲಿ ನಾನು ಇಲ್ಲ, ಅಲ್ಲಿ ಏನಾಗುತ್ತಿದೆಯೋ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿ ಅನ್‌ಫಾಲೋ ಕುರಿತು ಎದ್ದಿದ್ದ ಸುದ್ದಿಯನ್ನು ತಳ್ಳಿಹಾಕಿದರು.

ಈ ಬಾರಿಯ ಐಪಿಎಲ್‌ನಲ್ಲಿ ಜಡೇಜಾ ಕಳಪೆ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ 8 ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕಿಳಿದು, ಉಳಿದ ಪಂದ್ಯಗಳಲ್ಲಿ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಇನ್ನು ಒಟ್ಟು ಹತ್ತು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿರುವ ರವೀಂದ್ರ ಜಡೇಜಾ ಕೇವಲ 116 ರನ್ ಕಲೆಹಾಕಿದ್ದಾರೆ. ಇನ್ನು ಆಲ್‌ರೌಂಡರ್ ಆಟಗಾರನಾದ ಜಡೇಜಾ ಕೇವಲ 5 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications