ಆರ್‌ಸಿಬಿ ಮುಂದಿದೆ ಮೂರು ಕಠಿಣ ಸವಾಲು: ಅಗ್ನಿ ಪರೀಕ್ಷೆ ಗೆದ್ದು ಬರಲಿದ್ದಾರಾ ರಾಯಲ್ ಚಾಲೆಂಜರ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯ ಲೀಗ್ ಹಂತ ರೋಚಕ ಘಟ್ಟವನ್ನು ತಲುಪಿದೆ. ಎಲ್ಲಾ ತಂಡಗಳು ಪ್ಲೇಆಫ್ ಹಂತಕ್ಕೇರಲು ಅಂತಿಮ ಹಂತದ ಪ್ರಯತ್ನಗಳನ್ನು ನಡೆಸುತ್ತಿದ್ದು ಪೈಪೋಟಿ ತೀವ್ರಗೊಂಡಿದೆ. ಆರಂಭದಲ್ಲಿ ಗೆಲುವಿನ ಲಯದಲ್ಲಿದ್ದ ಕೆಲ ತಂಡಗಳು ಅಂತಿಮ ಹಂತದಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿದೆ. ಅಂಕಪಟ್ಟಿಯಲ್ಲಿ ಹಿಂದಿದ್ದ ತಂಡಗಳು ಗೆಲುವಿನ ಲಯಕ್ಕೆ ಬಂದಿದೆ. ಹೀಗಾಗಿ ಪೈಪೋಟಿ ತೀವ್ರಗೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪ್ಲೇಆಫ್ ಮೇಲೆ ಕಣ್ಣಿಟ್ಟಿದ್ದು ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದೆ. ಈಗಾಗಲೇ 11 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಪೈಕಿ ಆರು ಪಂದ್ಯಗಳಲ್ಲಿ ಗೆಲುವು ಹಾಗೂ ಐದರಲ್ಲಿ ಸೋಲು ಅನುಭವಿಸಿದ್ದು 12 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಆರ್‌ಸಿಬಿ ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿಯಿದ್ದು ಈ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೆ ಆರ್‌ಸಿಬಿ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಇಲ್ಲವಾದರೆ ಉಳಿದ ಪಂದ್ಯಗಳ ಫಲಿತಾಂಶ ಆರ್‌ಸಿಬಿಗೆ ಬಹಳ ಮುಖ್ಯವಾಗಲಿದೆ ಎಂಬುದು ಗಮನಿಸಬೇಕಾದ ಅಂಶ.
ಹಾಗಾದರೆ ಪ್ಲೇಆಫ್ ಹಂತಕ್ಕೆ ಮುನ್ನ ಲೀಗ್ ಹಂತದಲ್ಲಿ ಆರ್‌ಸಿಬಿಗೆ ಉಳಿದುಕೊಂಡಿರುವ ಮೂರು ಸವಾಲುಗಳು ಯಾವುದು? ಮುಂದೆ ಓದಿ..

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರದ ಸೆಣೆಸಾಟ
ಆರ್‌ಸಿಬಿಗೆ ಮುಂದಿರುವ ಮೊದಲ ಸವಾಲು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ. ಈ ಪಂದ್ಯ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಮೊದಲ ಬಾರಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಆರ್‌ಸಿಬಿ ಹೀನಾಯ ಸೋಲು ಅನುಭವಿಸಿತ್ತು. ಸನ್‌ರೈಸರ್ಸ್ ಹಯ್ರಾಬಾದ್‌ನ ವೇಗಿಗಳ ವಿರುದ್ಧ ಸಂಪುರ್ಣ ಮುಗ್ಗರಿಸಿದ ಆರ್‌ಸಿಬಿ ದಾಂಡಿಗರು ಹೀನಾಯ ಪ್ರದರ್ಶನ ನೀಡಿ ಕೇವಲ 68 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 8 ಓವರ್‌ಗಳಲ್ಲಿ ಮೀರಿ ನಿಲ್ಲುವ ಮೂಲಕ ಭಾರೀ ಅಂತರದ ಗೆಲುವು ಸಾಧಿಸಿತ್ತು. ಈ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಆರ್‌ಸಿಬಿ ಮುಂದಿದೆ.

ಪಂಜಾಬ್ ಕಿಂಗ್ಸ್ ವಿರುದ್ಧವೂ ಸೇಡಿನ ಕದನ
ಆರ್‌ಸಿಬಿ ತಂಡ ಈ ಬಾರಿಯ ಟೂರ್ನಿಯ 13ನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮುಂದಿನ ಶುಕ್ರವಾರದಂದು ನಡೆಯಲಿದ್ದು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಈ ಸರಣಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಆರ್‌ಸಿಬಿ ಸೋಲು ಅನುಭವಿಸಿತ್ತು. ಟೂರ್ನಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿಯೇ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ಆರ್‌ಸಿಬಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 206 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಮೊತ್ತವನ್ನು ಪಂಜಾಬ್ ಕಿಂಗ್ಸ್ ದಾಂಡಿಗರು 19 ಓವರ್‌ಗಳಲ್ಲಿಯೇ ಹಿಂದಿಕ್ಕಲು ಯಶಸ್ವಿಯಾಗಿದ್ದರು. ಈ ಮೂಲಕ ಆರ್‌ಸಿಬಿ ಆಘಾತಕಾರಿ ಸೋಲು ಅನುಭವಿಸಿತು. ತಂಡದ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಈ ಆಘಾತ ಸೋಲಿನ ನಂತರ ಆರ್‌ಸಿಬಿ ಮತ್ತೊಮ್ಮೆ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಮತ್ತೊಮ್ಮೆ ಸವಾಲಾಗಲಿದೆ ಗುಜರಾತ್ ಟೈಟನ್ಸ್
ಆರ್‌ಸಿಬಿ ತಂಡ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎರಡನೇ ಬಾರಿಗೆ ಎದುರಿಸಲಿದೆ. ಮೊದಲ ಮುಖಾಮುಖಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧವೂ ಆರ್‌ಸಿಬಿ ಸೋಲಿ ಅನುಭವಿಸಿತ್ತು. ರಾಹುಲ್ ತೆವಾಟಿಯಾ ಹಾಗೂ ಡೇವಿಡ್ ಮಿಲ್ಲರ್ ಅಂತಿಮ ಹಂತದಲ್ಲಿ ಭರ್ಜರಿಯಾಗಿ ಸಿಡಿಯುವ ಮೂಲಕ ಆರ್‌ಸಿಬಿ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದರು. ಆದರೆ ಈ ಪಂದ್ಯದ ಬಳಿಕ ಆಡಿದ ಎರಡು ಪಂದ್ಯಗಳಲ್ಲಿಯೂ ಗುಜರಾತ್ ಟೈಟನ್ಸ್ ತಂಡ ಸೋಲು ಅನುಭವಿಸಿದ್ದು ಹಿನ್ನೆಡೆ ಅನುಭವಿಸಿದೆ. ಈ ಪಂದ್ಯ ಕೂಡ ಆರ್‌ಸಿಬಿ ಪಾಳಿಗೆ ಮಹತ್ವದ್ದಾಗಿರಲಿದೆ.

ನೆಟ್ ರನ್‌ರೇಟ್ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆ
ಆರ್‌ಸಿಬಿ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಯಾವುದೇ ಆತಂಕವಿಲ್ಲದೆ ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ. ಆದರೆ ಒಂದು ಪಂದ್ಯವನ್ನು ಸೋತರೂ ನೆಟ್ ರನ್‌ರೇಟ್ ನಿರ್ಣಾಯಕವಾಗುವ ಸಾಧ್ಯತೆಯಿದೆ. ಆರ್‌ಸಿಬಿ ತಂಡ ಪ್ರಸ್ತುತ ನೆಟ್ ರನ್‌ರೇಟ್‌ನಲ್ಲಿ ಭಾರೀ ಹಿಂದಿರುವ ಕಾರಣ ಮುಂದಿನ ಪಂದ್ಯಗಳಲ್ಲಿ ಗೆಲುವಿನ ಜೊತೆಗೆ ರನ್‌ರೇಟ್‌ನ ಮಢಲೆಯೂ ಗಮನ ಹರಿಸಬೇಕಾದ ಅಗತ್ಯವಿದೆ. ಇಷ್ಟು ಸವಾಲುಗಳನ್ನು ಆರ್‌ಸಿಬಿ ಯಾವ ರೀತಿ ಮೀರಿ ನಿಲ್ಲಲಿದೆ ಎಂಬುದು ಪ್ರಸ್ತುತ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications