ಐಪಿಎಲ್ 2022: ಆರ್‌ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭಿಕ ಪಂದ್ಯಗಳಿಗೆ ಅನುಮಾನ! ಕಾರಣ ಇಲ್ಲಿದೆ

ಈ ಬಾರಿಯ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಕೂಡ ಬಲಿಷ್ಠ ತಂಡವನ್ನು ಕಟ್ಟಲು ಪ್ರಯತ್ನಿಸಿದೆ. ಐಪಿಎಲ್‌ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಬೆಂಗಳೂರು ಮೂಲದ ಆರ್‌ಸಿಬಿ ಫ್ರಾಂಚೈಸಿ ಕೂಡ ಉತ್ತಮ ತಂಡ ಕಟ್ಟುವ ಪ್ರಯತ್ನ ನಡೆಸಿದೆ. ಆರ್‌ಸಿಬಿ ಖರೀದಿಸಿರುವ ಆಟಗಾರರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಈಗ ಎಲ್ಲಲ್ಲಿದೆ. ಆದರೆ ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡಕ್ಕೆ ಸಣ್ಣ ಹಿನ್ನಡೆಯಾಗುವ ಸಾಧ್ಯತೆಯ ಸುಳಿವು ದೊರೆತಿದೆ.
ಈ ಬಾರಿಯ ಹರಾಜು ಪ್ರಕ್ರಿಯೆಗೂ ಮುನ್ನ ಆರ್‌ಸಿಬಿ ರೀಟೈನ್ ಮಾಡಿಕೊಂಡಿದ್ದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆ ಕಾಣಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೂ ಇದೆ. ಹಾಗಾದರೆ ಗ್ಲೆನ್ ಮ್ಯಾಕ್ಸ್‌ವೆಲ್ ಯಾವ ಕಾರಣಕ್ಕೆ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಭಾಗಿಯಾಗುವುದು ಅನುಮಾನವಾಗಿದೆ? ಇಲ್ಲಿದೆ ಮಾಹಿತಿ. ಮುಂದೆ ಓದಿ..

ರೀಟೈನ್ ಮಾಡಿಕೊಂಡ ಆರ್‌ಸಿಬಿ
ಕಳೆದ ಬಾರಿಯ ಆವೃತ್ತಿಗೂ ಮುನ್ನ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದರು. ಐಪಿಎಲ್ ಮುಕ್ತಾಯದ ಬಳಿಕ ತಂಡದ ಪ್ರಮುಖ ಆಟಗಾರನಾಗಿದ್ದ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ್ದ ಕಾರಣ ಆರ್‌ಸಿಬಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೀಟೈಮ್ ಮಾಡಿಕೊಂಡಿತ್ತು. 11 ಕೋಟಿ ನೀಡಿ ಆರ್‌ಸಿಬಿ ಆಸಿಸ್ ಸ್ಪೋಟಕ ಆಟಗಾರನನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಭಾರತೀಯ ಯುವತಿಯನ್ನು ವರಿಸಲಿದ್ದಾರೆ ಮ್ಯಾಕ್ಸ್‌ವೆಲ್
ಇನ್ನು ಕಳೆದ ವರ್ಷ ಭಾರತೀಯ ಮೂಲದ ಯುವತಿ ವಿನಿ ರಾಮನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮಾರ್ಚ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯ ಸಾಧ್ಯತೆ
ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಗುಳಿಯುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಕಾರಣ ಆರಂಭಿಕ ಒಂದೆರಡು ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ವರದಿ ನಿಜವಾದಲ್ಲಿ ಆರ್‌ಸಿಬಿ ತಂಡಕ್ಕೆ ಸಣ್ಣಮಟ್ಟಿನ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ.

ಇನ್ನೂ ಕೆಲ ಆಸಿಸ್ ಆಟಗಾರರು ಆರಂಭಿಕ ಪಂದ್ಯಗಳಿಗೆ ಅನುಮಾನ
ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರವಲ್ಲದೆ ಆಸ್ಟ್ರೇಲಿಯಾದ ಇನ್ನೂ ಕೆಲ ಪ್ರಮುಖ ಆಟಗಾರರು ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಲಭ್ಯವಾಗುವುದು ಅನುಮಾನವಾಗಿದೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೋಯ್ನಿಸ್, ಜೋಶ್ ಹೇಜಲ್‌ವುಡ್, ಮ್ಯಾಥ್ಯೂ ವೇಡ್, ಡೇನಿಯಲ್ ಸ್ಯಾಮ್ಸ್ ಪಾಕಿಸ್ತಾನ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಆಟಗಾರರು ಕೂಡ ಮೊದಲ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸದ ಸರಣಿ ಮಾರ್ಚ್ 4ಕ್ಕೆ ಆರಂಭವಾಗಲಿದ್ದು ಸರಣಿಯ ಅಂತಿಮ ಪಂದ್ಯ ಏಪ್ರಿಲ್ 5ರಿಂದ ಆರಂಭವಾಗಲಿದೆ. ಐಪಿಎಲ್ ಟೂರ್ನಿ ಮಾರ್ಚ್ ಅಂತಿಮ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications