
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅನುಭವಿಸಿದ ಮೊದಲ ಮುಖಾಮುಖಿಯ ಸೋಲಿಗೆ ಆರ್‌ಸಿಬಿ ಸೇಡು ತೀರಿಸಿಕೊಂಡಿದೆ. ಈ ಗೆಲುವಿನಿಂದಿಗೆ ಫಾಫ್ ಪಡೆಗೆ ಅಮೂಲ್ಯ ಎರಡು ಅಂಕಗಳು ದೊರೆತಿದ್ದು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲ್ಲಾ ವಿಭಾಗದಲ್ಲಿಯೂ ಸಿಎಸ್‌ಕೆ ತಂಡಕ್ಕಿಂತ ಮೇಲುಗೈ ಸಾಧಿಸಲು ಯಶಸ್ವಿಯಾಯಿತು. ಮೊದಲಿಗೆ ಬ್ಯಾಟಿಂಗ್‌ನಲ್ಲಿ 174 ರನ್‌ಗಳ ಸವಾಲಿನ ಗುರಿ ನೀಡಿ ಮಿಂಚಿದ ಆರ್‌ಸಿಬಿ ನಂತರ ಬೌಲಿಂಗ್‌ನಲ್ಲಿಯೂ ಸಂಪೂರ್ಣ ಮೇಲುಗೈ ಸಾಧಿಸಿತು. ಬ್ಯಾಟಿಂಗ್ ವಿಭಾಗದಲ್ಲಿ ಲೋಮ್ರೋರ್, ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಅಮೂಲ್ಯ ಕೊಡುಗೆ ನೀಡಿದರೆ ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಹೇಜಲ್‌ವುಡ್ ಅವರಿಂದ ಅದ್ಭುತ ಪ್ರದರ್ಶನ ಬಂದಿತು. ಹೀಗಾಗಿ ಆರ್‌ಸಿಬಿ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಉತ್ತಮ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡ 8 ವಿಕೆಟ್ ಕಳೆದುಕೊಂಡು 173ರನ್ ಗಳಿಸಿದೆ. ಆರ್‌ಸಿಬಿ ಪರವಾಗಿ ಮಹಿಪಾಳ್ ಲ್ಯಾಮ್ರೋರ್ 42 ರನ್‌ಗಳ ಕೊಡುಗೆ ನೀಡುವ ಮೂಲಕ ಮಿಂಚಿದರು. ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿಯೂ ಆರ್‌ಸಿಬಿ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಿಮ ಹಂತದಲ್ಲಿ ಡಿಕೆ 17 ಎಸೆತಗಳಲ್ಲಿ 26 ರನ್‌ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣವಾದರು. ರಜತ್ ಪಾಟೀದಾರ್ ಕೂಡ 21 ರನ್‌ಗಳ ಕೊಡುಗೆ ನೀಡಿದರು. ಇನ್ನು ಈ ಪಂದ್ಯದಲ್ಲಿ ಆರಂಭಿಕ ಜೊಡಿಯಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಅವರಿಂದ ಉತ್ತಮ ಜೊತೆಯಾಟ ಬಂದಿದೆ. ಮೊದಲ ವಿಕೆಟ್‌ಗೆ ಈ ಜೋಡಿ 62 ರನ್‌ಗಳ ಕೊಡುಗೆ ನೀಡಿದ್ದಾರೆ. ಫಾಪ್ ಡು ಪ್ಲೆಸಿಸ್ 22 ಎಸೆತಗಳಲ್ಲಿ 38 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಕೊಹ್ಲಿ 33 ಎಸೆತಗಳಲ್ಲಿ 30 ರನ್‌ಗಳಿಸಿದರು.
ಕಾನ್ವೆ, ಅಲಿ ಹೋರಾಟ ವ್ಯರ್ಥ
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಪ್ರನುಖ ಆಟಗಾರರು ಮಿಂಚಲು ವಿಫಲವಾದರು. ಋತುರಾಜ್ ಗಾಯಕ್ವಾಡ್ 28 ರನ್‌ಗಳಿಗೆ ಔಟಾದರೆ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ ಕೂಡ ಅಗ್ಗಕ್ಕೆ ವಿಕೆಟ್ ಕಳೆದುಕೊಂಡರು. ಆದರೆ ಆರಂಭಿಕ ಆಟಗಾರ ಡೆವೋನ್ ಕಾನ್ವೆ ಈ ಪಂದ್ಯದಲ್ಲಿಯೂ ಭರ್ಜರಿ ಅರ್ಧ ಶತಕ ಗಳಿಸಿ ಮಿಂಚಿದರು. 37 ಎಸೆತಗಳಲ್ಲಿ ಕಾನ್ವೆ 56 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಅನುಭವಿ ಆಲ್‌ರೌಂಡರ್ ಮೊಯೀನ್ ಅಲಿ ಕೂಡ 34 ರನ್‌ಗಳ ಕೊಡುಗೆ ನೀಡಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 160 ರನ್‌ಗಳಿಗೆ ತನ್ನ ಹೋರಾಟವನ್ನು ಸಿಎಸ್‌ಕೆ ಅಂತ್ಯಗೊಳಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಅನುಜ್ ರಾವತ್, ಡೇವಿಡ್ ವಿಲ್ಲಿ, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಜೇಸನ್ ಬೆಹ್ರೆಂಡಾರ್ಫ್, ಚಾಮ ವಿ ಮಿಲಿಂದ್, ಫಿನ್ ಅಲೆನ್, ಶೆರ್ಫೇನ್ ರುದರ್ಫೋರ್ಡ್, ಆಕಾಶ್ ದೀಪ್, ಅನೀಶ್ವರ್ ಗೌತಮ್
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಎಂಎಸ್ ಧೋನಿ (ಸಿ & ವಿಕೆ), ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ
ಬೆಂಚ್: ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ತುಷಾರ್ ದೇಶಪಾಂಡೆ, ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮಥೀಶ ಪತಿರಾನ, ಭಗತ್ ವರ್ಮಾ, ರಾಜವರ್ಧನ್ ಹಂಗರ್ಗೇಕರ್, ಕೆಎಂ ಆಸಿಫ್, ಮಿಚೆಲ್ ಸ್ಯಾಂಟ್ನರ್