
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಏಪ್ರಿಲ್ 12ರಂದು ಸೆಣಸಾಡಲಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭದ ಸನಿಹದಲ್ಲಿ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಕಾರಣ ಈ ಬಾರಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಆದರೆ, ರವೀಂದ್ರ ಜಡೇಜಾ ನಾಯಕನಾಗಿ ಆರಂಭದಲ್ಲೇ ಎಡವಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿನ ತನ್ನ ಮೊದಲ 4 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.
ಇತ್ತ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಸಾರಥ್ಯದಲ್ಲಿ ಕಣಕ್ಕಿಳಿದಿದ್ದು, ತನ್ನ ಮೊದಲ 4 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಜಯ ಸಾಧಿಸಿ ಉಳಿದೊಂದು ಪಂದ್ಯದಲ್ಲಿ ಸೋತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಪ್ರಥಮ ಪಂದ್ಯದಲ್ಲಿ ಸೋತು ಕಹಿ ಆರಂಭವನ್ನು ಪಡೆದುಕೊಂಡಿತ್ತು. ಆದರೆ ನಂತರ ನಡೆದ 3 ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ತಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಸೋಲುಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಜಯ ಪಡೆದುಕೊಂಡು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಹೀಗೆ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿನ ಮೊದಲ 4 ಪಂದ್ಯಗಳಲ್ಲಿ ಸೋತು ಮುಖಭಂಗವನ್ನು ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರವೀಂದ್ರ ಜಡೇಜಾ ಬಳಗ ಈ ಪಂದ್ಯದಲ್ಲಿ ಜಯ ಸಾಧಿಸಿ ಗೆಲುವಿನ ಖಾತೆ ತೆರೆಯುತ್ತಾ ಅಥವಾ ಹ್ಯಾಟ್ರಿಕ್ ಜಯದ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದಲ್ಲಿಯೂ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುತ್ತಾ ಎಂಬುದು ಪಂದ್ಯದ ಮೇಲೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಇನ್ನು ಈ ಪಂದ್ಯದಲ್ಲಿ ಇತ್ತಂಡಗಳ ಕೆಲ ಆಟಗಾರರು ಹಲವು ಮೈಲಿಗಲ್ಲ ಹಾಗೂ ದಾಖಲೆಗಳನ್ನು ಮಟ್ಟುವ ಹಾದಿಯಲ್ಲಿದ್ದು, ಅವರ ಕುರಿತಾದ ವಿವರ ಈ ಕೆಳಕಂಡಂತಿದೆ.

* ಇಲ್ಲಿಯವರೆಗೂ 199 ಟಿ ಟ್ವೆಂಟಿ ಸಿಕ್ಸರ್ ಬಾರಿಸಿರುವ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಒಂದು ಸಿಕ್ಸರ್ ಬಾರಿಸಿದರೆ 200 ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಮೊಯಿನ್ ಅಲಿ ಇಲ್ಲಿಯವರೆಗೂ 149 ಟಿ ಟ್ವೆಂಟಿ ವಿಕೆಟ್ ಪಡೆದಿದ್ದು, ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೆ 150 ಟಿ ಟ್ವೆಂಟಿ ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.
* ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ 3998 ರನ್ ಕಲೆಹಾಕಿರುವ ಅಂಬಾಟಿ ರಾಯುಡು ಈ ಪಂದ್ಯದಲ್ಲಿ 2 ರನ್ ಗಳಿಸಿದರೆ 4000 ಐಪಿಎಲ್ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಎಂಎಸ್ ಧೋನಿ 200 ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲು ಇನ್ನೂ 8 ಸಿಕ್ಸರ್ ಬಾರಿಸಿದ ಬೇಕಾದ ಅವಶ್ಯಕತೆಯಿದೆ.
* ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1000 ಐಪಿಎಲ್ ರನ್ ಕಲೆಹಾಕಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯಲು 52 ರನ್ ಬಾರಿಸಬೇಕಾದ ಅಗತ್ಯವಿದೆ.