RCB vs LSG IPL 2022 Eliminator : ಎರಡೂ ತಂಡಗಳ ಬಲ ಮತ್ತು ದೌರ್ಬಲ್ಯಗಳ ಪಟ್ಟಿ; ಬಲಿಷ್ಠ ತಂಡ ಯಾವುದು?

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಅಂತಿಮವಾಗಿ ಪ್ಲೇ ಆಫ್ ಪ್ರವೇಶಿಸುವುದರಲ್ಲಿ ಯಶಸ್ವಿಯಾಗಿದೆ.
ಗುಜರಾತ್ ಟೈಟನ್ಸ್ ತಂಡದ ವಿರುದ್ಧ ನಡೆದ ತನ್ನ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ನಂತರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಿ ಪ್ಲೇ ಆಫ್ ಪ್ರವೇಶಿಸಿತು. ಹೀಗೆ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿರುವ ರಾಯಲ್ ಚಾಲೆಂಜರ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಹೌದು, ಲಕ್ನೋ ಸೂಪರ್ ಜೈಂಟ್ಸ್ 18 ಅಂಕಗಳನ್ನು ಪಡೆದುಕೊಂಡು ಅಂಕಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸರಿದೂಗಿಸಿದ್ದರೂ ಸಹ ನೆಟ್ ರನ್ ರೇಟ್ ಕಡಿಮೆ ಇರುವ ಕಾರಣ ಕ್ವಾಲಿಫೈಯರ್ ಸುತ್ತಿಗೆ ಲಗ್ಗೆ ಹಾಕುವಲ್ಲಿ ವಿಫಲವಾಯಿತು. ಇನ್ನು ಇತ್ತಂಡಗಳ ನಡುವೆ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಪಂದ್ಯದಲ್ಲಿ ಜಯ ಸಾಧಿಸುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಆಯ್ಕೆಗೊಂಡರೆ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗೆ ಈ ಮಹತ್ವದ ಪಂದ್ಯದಲ್ಲಿ ಸೆಣಸಾಡಲಿರುವ ಈ 2 ತಂಡಗಳ ಬಲ ಹಾಗೂ ದೌರ್ಬಲ್ಯಗಳೇನು ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲ ಮತ್ತು ದೌರ್ಬಲ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲ ಬೌಲಿಂಗ್ ಎಂಬುದನ್ನು ಈ ಬಾರಿ ಘಂಟಾಘೋಷವಾಗಿ ಹೇಳಬಹುದಾಗಿದೆ. ಇಷ್ಟು ವರ್ಷಗಳ ಕಾಲ ಕಳಪೆ ಬೌಲಿಂಗ್ ಕಾರಣದಿಂದಾಗಿ ಟ್ರೋಲ್ ಆಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಈ ಬಾರಿ ವನಿಂದು ಹಸರಂಗ ಮತ್ತು ಜೋಶ್ ಹೇಜಲ್ ವುಡ್ ಇರುವ ಕಾರಣ ಬಲಿಷ್ಠ ಎನಿಸಿಕೊಂಡಿದೆ.
ದೌರ್ಬಲ್ಯ: ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ತಂಡದ ಪರ ಸಾಂಪ್ರದಾಯಿಕ ಆರಂಭವನ್ನು ನೀಡುವ ಕಾರಣದಿಂದಾಗಿ ನಂತರ ಕಣಕ್ಕಿಳಿಯಲಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಸ್ ಅಹ್ಮದ್, ದಿನೇಶ್ ಕಾರ್ತಿಕ್ ಮತ್ತು ರಜತ್ ಪತಿದಾರ್ ಮೇಲೆ ದೊಡ್ಡ ಮಟ್ಟದ ಇನಿಂಗ್ಸ್ ಕಟ್ಟಲು ಸ್ಪೋಟಕ ಬ್ಯಾಟಿಂಗ್ ನಡೆಸಬೇಕಾದ ಒತ್ತಡ ಬೀಳಲಿರುವುದು ತಂಡದ ದೌರ್ಬಲ್ಯವಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ಬಲ ಮತ್ತು ದೌರ್ಬಲ್ಯ
ಬಲ: ಲಕ್ನೋ ಸೂಪರ್ ಜಯಂಟ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಜೋಡಿ ತಂಡದ ಬಲ ಎಂದೇ ಹೇಳಬಹುದು. ಈ ಇಬ್ಬರೂ ಆಟಗಾರರು ಸೇರಿ ಟೂರ್ನಿಯಲ್ಲಿ ಇಲ್ಲಿಯವರೆಗೂ 1039 ರನ್ ಬಾರಿಸಿದ್ದು, ಅವೇಶ್ ಖಾನ್, ಮೊಹ್ಸಿನ್ ಖಾನ್, ದುಷ್ಮಂತ ಚಮೀರ ಮತ್ತು ಜೇಸನ್ ಹೋಲ್ಡರ್ ವೇಗದ ಅಟ್ಯಾಕ್ ತಂಡದ ಮತ್ತೊಂದು ಬಲ ಎಂದೇ ಹೇಳಬಹುದು.
ದೌರ್ಬಲ್ಯ: ತಂಡದ ಆರಂಭಿಕ ಜೋಡಿಯಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೇಲೆ ಲಕ್ನೋ ಸೂಪರ್ ಜೈಂಟ್ಸ್ ಹೆಚ್ಚು ಅವಲಂಬಿತವಾಗಿದೆ. ಕೆಎಲ್ ರಾಹುಲ್ 2 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದರೆ, ಕ್ವಿಂಟನ್ ಡಿ ಕಾಕ್ 1 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗೆ ತಂಡದ ಪರ ಈ ಇಬ್ಬರೇ ಹೆಚ್ಚು ಉತ್ತಮ ಆಟವನ್ನು ಆಡಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸತತವಾಗಿ ಉತ್ತಮ ಪ್ರದರ್ಶನ ನೀಡದೇ ಇರುವುದು ತಂಡದ ದೌರ್ಬಲ್ಯವಾಗಿದೆ.

ಯಾವ ತಂಡ ಬಲಿಷ್ಠ?
ಟೂರ್ನಿಯ ಆರಂಭದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಿಕ್ಕಾಪಟ್ಟೆ ಬಲಿಷ್ಠ ತಂಡ ಎಂಬಂತೆ ತೋರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಪಂದ್ಯಗಳನ್ನು ಸೋತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತುಸು ಬಲಿಷ್ಠವಾಗಿದೆ ಎಂದೇ ಹೇಳಬಹುದು. ಏಕೆಂದರೆ ಇಡೀ ತಂಡ ಆರಂಭಿಕ ಜೋಡಿಯ ಮೇಲೆ ಅವಲಂಬಿತವಾಗಿರದೇ ಏಳನೇ ಕ್ರಮಾಂಕದ ಆಟಗಾರ ಕಣಕ್ಕಿಳಿಯುವವರೆಗೂ ಪಂದ್ಯ ಗೆಲ್ಲುವ ಭರವಸೆಯನ್ನು ಹುಟ್ಟುಹಾಕುತ್ತದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗಿದೆ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications