
ಕೆಲವೇ ಗಂಟೆಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜಾ ಗಾಯದಿಂದಾಗಿ ಮುಂದಿನ ಪಂದ್ಯಗಳಿಗೆ ಲಭ್ಯವಿಲ್ಲ ಎಂಬ ಮಾಹಿತಿಯನ್ನು ನೀಡಿತ್ತು. ಇದಾದ ನಂತರ ನಡೆದ ಘಟನೆಯೊಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಅನುಭವ ಆಟಗಾರ ರವೀಂದ್ರ ಜಡೇಜಾ ಮಧ್ಯೆ ಎಲ್ಲವೂ ಸರಿಯಿಲ್ಲವೇ ಎಂಬಂತಾ ಅನುಮಾನ ಮೂಡಲು ಕಾರಣವಾಗಿದೆ.
ವರದಿಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೌರಾಷ್ಟ್ರ ಮೂಲದ ಆಟಗಾರ ರವೀಂದ್ರ ಜಡೇಜಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫಾಲೋ ಮಾಡಿದೆ ಎನ್ನಲಾಗಿದೆ. ಈ ಬೆಳವಣಿಗೆಯೇ ಸಿಎಸ್‌ಕೆ ಹಾಗೂ ರವೀಂದ್ರ ಜಡೇಜಾ ಮಧ್ಯೆ ಎಲ್ಲವೂ ಸರಿಯಿಲ್ಲವೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಂಡದ ಎಡಗೈ ಆಟಗಾರ, ಅನುಭವಿ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ಆರ್‌ಸಿಬಿ ವಿರುದ್ಧಧ ಪಂದ್ಯದ ಸಂದರ್ಭದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದು ಆ ಕಾರಣದಿಂದಾಗಿ ಟೂರ್ನಿಯ ಮುಂದಿನ ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ ಎಂದು ಮಾಹಿತಿಯನ್ನು ನೀಡಿತ್ತು. "ರವೀಂದ್ರ ಜಡೇಜಾ ಅವರ ಪಕ್ಕೆಲುಬಿಗೆ ಗಾಯವಾಗಿದೆ, ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಡೆದ ಭಾನುವಾರದ ಪಂದ್ಯಕ್ಕೆ ಅವರು ಲಭ್ಯವಿರಲ್ಲ. ನಿಗಾದಲ್ಲಿದ್ದ ಅವರು ವೈದ್ಯರ ಸಲಹೆಯ ಮೇರೆಗೆ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ" ಎಂದು ಸಿಎಸ್‌ಕೆ ಫ್ರಾಂಚೈಸಿ ಮಾಹಿತಿ ನೀಡಿತ್ತು.
ಈ ಮಧ್ಯೆ ಕೆಲ ವರದಿಗಳು ರವೀಂದ್ರ ಜಡೇಜಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅನ್‌ಫಾಲೋ ಮಾಡಿದ್ದಾರೆ ಎಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಳೆದ ಹತ್ತು ವರ್ಷಗಳಿಂದ ಇರುವ ಜಡೇಜಾ ತಂಡದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿಯ ಹರಾಜಿಗೂ ಮುನ್ನ ನಡೆದ ರೀಟೆನ್ಶನ್‌ನಲ್ಲಿ ರವೀಂದ್ರ ಜಡೇಜಾ ಅವರನ್ನು ಫ್ರಾಂಚೈಸಿ 16 ಕೋಟಿ ನೀಡಿ ಉಳಿಸಿಕೊಂಡಿತ್ತು.
ಇನ್ನು ಈ ಬೆಳವಣಿಗೆಯ ಬಗ್ಗೆ ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕಾಸಿ ವಿಶ್ವನಾಥನ್ ಅವರಲ್ಲಿ ಕೇಳಿದಾಗ ಈ ಬಗ್ಗೆ ತನಗೆ ಹೆಚ್ಚಿನ ಮಾಹಿತಿಯಿಲ್ಲ ಎಂದಷ್ಟೇ ತಿಳಿಸಿದ್ದಾರೆ. "ನನಗೆ ಈ ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ವಿಚಾರವಾಗಿ ಯಾವುದೇ ಸುಳಿವಿಲ್ಲ. ಹಾಗಾಗಿ ನಾನು ಈ ವಿಚಾರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ ಸಿಎಸ್‌ಕೆ ಸಿಇಒ.
ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದರೂ ಅತ್ಯಂತ ನೀರಸ ಟೂರ್ನಿಯನ್ನು ಹೊಂದಿದೆ. ಎಂಎಸ್ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಒಪ್ಪಿಸಿದ ನಂತರ ಜಡೇಜಾ ನೇತೃತ್ವದಲ್ಲಿ ಕಳಪೆ ಪ್ರದರ್ಶನ ನೀಡಿತು ಸಿಎಸ್‌ಕೆ. ಹೊಸ ನಾಯಕನ ನೇತೃತ್ವದಲ್ಲಿ ತಂಡ ಸತತ 7 ಸೋಲುಗಳನ್ನು ಅನುಭವಿಸಿತು. ಈ ಸೋಲುಗಳಿಂದಾಗಿ ಟೂರ್ನಿ ಮೊದಲಾರ್ಧ ಅಂತ್ಯವಾಗುವ ವೇಳೆಗಾಗಲೇ ಮುಂದಿನ ಹಂತಕ್ಕೇರುವ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಾಗಿತ್ತು. ಅದಿನ್ನೂ ಅದಿಕೃತವಾಗಬೇಕಿದೆಯಷ್ಟೇ.
ಅದಾದ ಬಳಿಕ ಫ್ರಾಂಚೈಸಿ ಮತ್ತೊಂದು ಮಾಹಿತಿಯನ್ನು ಟ್ವಿಟ್ಟರ್ ಮೂಲಕವೇ ನೀಡಿತ್ತು. ತಂಡದ ನಾಯಕನಾಗಿದ್ದ ರವೀಂದ್ರ ಜಡೇಜಾ ನಾಯಕತ್ವವನ್ನು ಎಂಎಸ್ ಧೋನಿಗೆ ಮರಳಿಸುತ್ತಿದ್ದಾರೆ. ತನ್ನ ವೈಯಕ್ತಿಕ ಪ್ರದರ್ಶನದ ಮೇಲೆ ಹೆಚ್ಚಿನ ಗಮನಹರಿಸುವ ದೃಷ್ಟಿಯಿಂದಾಗಿ ಈ ನಿರ್ಧಾರವನ್ನು ಜಡೇಜಾ ತೆಗೆದುಕೊಂಡಿದ್ದಾರೆ ಎಂದಿತ್ತು. ಇದೀಗ ಜಡೇಜಾ ಹಾಗೂ ಸಿಎಸ್‌ಕೆ ಫ್ರಾಂಚೈಸಿ ಪರಸ್ಪರರನ್ನು ಅನ್‌ಫಾಲೋ ಮಾಡಿಕೊಂಡಿರುವ ವರದಿ ಕುತೂಹಲ ಮೂಡಿಸಿದೆ.