RCB vs RR: ಈ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪಲಿದೆ ಎಂದ ಸಂಜಯ್ ಮಂಜ್ರೇಕರ್

ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಕಳೆದ ಭಾನುವಾರ ಮುಕ್ತಾಯಗೊಂಡಿದ್ದು, ಮುಂದಿನ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆಬೀಳಲಿದೆ. ಇನ್ನು ಈ ಬಾರಿ ಪ್ಲೇಆಫ್ ಸುತ್ತಿಗೆ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಯಶಸ್ವಿಯಾಗಿ ಲಗ್ಗೆ ಇಟ್ಟಿದ್ದವು.
ಈ ಪೈಕಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಗುಜರಾತ್ ಟೈಟನ್ಸ್ ತಂಡ ನೇರವಾಗಿ ಫೈನಲ್ ಪಂದ್ಯದ ಟಿಕೆಟ್ ಗಿಟ್ಟಿಸಿಕೊಂಡಿದ್ದರೆ, ಸೋತ ಸಂಜು ಸ್ಯಾಮ್ಸನ್ ಬಳಗ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಬೇಕಿದೆ. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆಗೆ ಮಣ್ಣು ಮುಕ್ಕಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡಿದ್ದು, ಇಂದು ( ಮೇ 27 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಳ್ಳಲಿದ್ದರೆ, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳೂ ಸಹ ಗೆಲ್ಲುವತ್ತ ಚಿತ್ತ ನೆಟ್ಟಿದ್ದು, ಬಲಿಷ್ಟ ಆಟಗಾರರನ್ನೊಳಗೊಂಡ ತಂಡಗಳೊಂದಿಗೆ ಕಣಕ್ಕಿಳಿದು ಗೆದ್ದು ಫೈನಲ್ ಪಂದ್ಯದ ಪ್ರವೇಶ ಪಡೆದುಕೊಳ್ಳುವತ್ತ ಕಣ್ಣಿಟ್ಟಿವೆ. ಇನ್ನು ಈ ಪಂದ್ಯದಲ್ಲಿ ಯಾವ ತಂಡ ಗೆದ್ದು ಫೈನಲ್ ಪ್ರವೇಶಿಸಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಬಹುದು ಎಂಬುದರ ಕುರಿತು ಹಲವಾರು ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಯಾವ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್ ಪಂದ್ಯದ ಪ್ರವೇಶವನ್ನು ಪಡೆದುಕೊಳ್ಳಲಿದೆ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಈ ತಂಡ ಗೆಲ್ಲಲಿದೆ
ಇಂದಿನ ಪಂದ್ಯದ ಕುರಿತು ಮಾತನಾಡಿದ ಸಂಜಯ್ ಮಂಜ್ರೇಕರ್ ಎರಡೂ ತಂಡಗಳೂ ಬಲಿಷ್ಟವಾಗಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೊಡ್ಡ ಪಂದ್ಯಗಳಲ್ಲಿ ಅಬ್ಬರಿಸಬಲ್ಲ ಆಟಗಾರರನ್ನು ಒಳಗೊಂಡಿದೆ ಎಂದಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ ಎಂಬ ವಿಶ್ವಾಸವನ್ನು ಸಂಜಯ್ ಮಂಜ್ರೇಕರ್ ಹೊರಹಾಕಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ಗೆ ಈ ಆಟಗಾರನದ್ದೇ ಹಿನ್ನಡೆ
ಇನ್ನೂ ಮುಂದುವರೆದು ಮಾತನಾಡಿರುವ ಸಂಜಯ್ ಮಂಜ್ರೇಕರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಹಿನ್ನಡೆಯುಂಟುಮಾಡಬಹುದು ಎಂದು ಊಹಿಸಿದ್ದಾರೆ. ಫ್ಲಾಟ್ ಪಿಚ್ ಆದ ಕಾರಣ ರವಿಚಂದ್ರನ್ ಅಶ್ವಿನ್ ಎಸೆತಗಳು ತಂಡಕ್ಕೆ ತೊಂದರೆಯನ್ನು ಉಂಟುಮಾಡಬಹುದು ಎಂದಿರುವ ಮಂಜ್ರೇಕರ್ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲವಾಗಿದ್ದರೆ ಅಶ್ವಿನ್ ಡೇಂಜರಸ್ ಆಗಲಿದ್ದಾರೆ ಎಂದಿದ್ದಾರೆ ಹಾಗೂ ಅಶ್ವಿನ್ ಮತ್ತು ಚಹಲ್ ಜೋಡಿ ಎದುರಾಳಿಗಳಿಗೆ ಕಂಟಕವಾಗಬಹುದು ಎಂದೂ ಸಹ ಮಂಜ್ರೇಕರ್ ಹೇಳಿಕೆ ನೀಡಿದ್ದಾರೆ.

ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದರು ರೈನಾ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಬೇಕು ಎಂದು ಸುರೇಶ್ ರೈನಾ ತಮ್ಮ ಆಸೆಯನ್ನು ಮುಕ್ತಕಂಠದಿಂದ ಹೇಳಿದ್ದರು. ಐಪಿಎಲ್ ಉದ್ಘಾಟನಾ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸತತವಾಗಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿಗೋಸ್ಕರವಾದರೂ ಆರ್‌ಸಿಬಿ ಕಪ್ ಗೆಲ್ಲಬೇಕು ಎಂದು ಸುರೇಶ್ ರೈನಾ ಆಶಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications