ಕೆಕೆಆರ್ ಪರ ಆಡಲೇಬೇಕೆಂದು ಸ್ವತಃ ಶಾರುಖ್ ಖಾನ್ ಆಹ್ವಾನಿಸಿದ್ದರು ಎಂದ ಪಾಕ್ ಮಾಜಿ ಕ್ರಿಕೆಟಿಗ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾಗವಹಿಸಲು ಬಿಸಿಸಿಐ ಅನುಮತಿಯನ್ನು ನೀಡುತ್ತಿಲ್ಲ. ಆದರೆ, ಮೊದಲನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆದಾಗ ಆ ಆವೃತ್ತಿಯಲ್ಲಿ ಪಾಕಿಸ್ತಾನದ ಆಟಗಾರರೂ ಸಹ ಭಾಗವಹಿಸಿದ್ದರು. ಹೌದು, 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ವಿವಿಧ ತಂಡಗಳ ಪರ ಪಾಕಿಸ್ತಾನದ ಆಟಗಾರರಾದ ಶೋಯೆಬ್ ಅಖ್ತರ್, ಶೋಯೆಬ್ ಮಲಿಕ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಆಸಿಫ್, ಕಮ್ರಾನ್ ಅಕ್ಮಲ್ ಮತ್ತು ಸೊಹೇಲ್ ತನ್ವೀರ್ ಸೇರಿದಂತೆ ಇನ್ನೂ ಹಲವಾರು ಆಟಗಾರರು ಭಾಗವಹಿಸಿದ್ದರು.
ಆದರೆ, 2008ರಲ್ಲಿ ಮುಂಬೈ ನಗರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ರಾಜಕೀಯ ಹಾಗೂ ಸುರಕ್ಷತೆಯ ಕಾರಣಗಳಿಂದಾಗಿ ಪಾಕಿಸ್ತಾನದ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸುವುದಕ್ಕೆ ನಿಷೇಧವನ್ನು ಹೇರಲಾಯಿತು. ಹೀಗೆ ಆಗಿನಿಂದ ಇಂದಿನವರೆಗೂ ಪಾಕಿಸ್ತಾನಿ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಯೇ ಇಲ್ಲ. ಇನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯಾಸಿರ್ ಅರಾಫತ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಮಾತನಾಡಿದ್ದು, ತಮ್ಮನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಲು ಶಾರುಖ್ ಖಾನ್ ಮೊದಲ ಐಪಿಎಲ್ ಆವೃತ್ತಿಯ ಸಂದರ್ಭದಲ್ಲಿ ಆಹ್ವಾನಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
"ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 2008ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಆಟಗಾರರ ಕಿರುಪಟ್ಟಿಯನ್ನು ರಚಿಸಿತ್ತು, ಆದರೆ ಆ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದೇ ಇದ್ದ ಕಾರಣ ನಾನು ಆ ಆವೃತ್ತಿಯಲ್ಲಿ ಭಾಗವಹಿಸಲಿಲ್ಲ" ಎಂದು ಯಾಸಿರ್ ಅರಾಫತ್ ಡೆನ್ಸ್ ಕ್ರಿಕೆಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಅವರು "2008ರಲ್ಲಿ ನಾನು ಕೆಂಟ್ ಪರ ಕೌಂಟಿ ಕ್ರಿಕೆಟ್ ಆಡುತ್ತಿದ್ದೆ, ಆ ಪಂದ್ಯದ ಸಮಯದಲ್ಲಿ ಒಂದು ವಿಶೇಷ ತಂಡ ನನ್ನನ್ನು ಭೇಟಿ ಮಾಡಿ ಶಾರುಖ್ ಖಾನ್ ನಿಮಗೆ ಕೆಕೆಆರ್ ಪರ ಆಡುವ ಆಫರ್ ನೀಡಿದ್ದಾರೆ ಎಂದು ಹೇಳಿದ್ದರು" ಎಂದು ತಿಳಿಸಿದರು.
"ಆರಂಭದಲ್ಲಿ ನಾನು ಇದನ್ನು ತಮಾಷೆಗಾಗಿ ಮಾಡುತ್ತಿದ್ದಾರೆ ಎಂದು ತಿಳಿದಿದ್ದೆ, ಶಾರುಖ್ ಖಾನ್ ಯಾಕೆ ಇವರನ್ನು ನನ್ನ ಜತೆ ಮಾತನಾಡಲು ಕಳುಹಿಸುತ್ತಾರೆ ಎಂದುಕೊಂಡಿದ್ದೆ. ಆದರೆ, ನಂತರ ಅವರು ವಿಸಿಟಿಂಗ್ ಕಾರ್ಡ್ ನೀಡಿ ನನ್ನ ವಿವರ ಪಡೆದರು" ಎಂದು ಯಾಸಿರ್ ಅರಾಫರ್ ತಿಳಿಸಿದರು.
ಅಷ್ಟೇ ಅಲ್ಲದೇ ತಾನು ಇನ್ನೂ ಫ್ರಾಂಚೈಸಿಯನ್ನು ಸಂಪರ್ಕಿಸಲಿಲ್ಲ ಎಂಬ ಕಾರಣಕ್ಕೆ ತನಗೆ ಒಂದು ಇಮೇಲ್ ಸಂದೇಶ ಕೂಡ ಬಂದಿತ್ತು ಎಂದು ತಿಳಿಸಿದ ಯಾಸಿರ್ ಅರಾಫತ್ ನಂತರ ಕೆಲ ದಿನಗಳ ಕಾಲ ಇದೆಲ್ಲಾ ನಿಂತುಹೋಯಿತು ಎಂದು ತಿಳಿಸಿದರು. ಹಾಗೂ ನಂತರ ಮತ್ತೊಮ್ಮೆ ತನ್ನನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಂಪರ್ಕಿಸಿತ್ತು ಎಂದಿರುವ ಯಾಸಿರ್ ಅರಾಫತ್ 3 ವರ್ಷಗಳ ಒಪ್ಪಂದದ ಕುರಿತು ಮಾತನಾಡಿತ್ತು ಹಾಗೂ ಸ್ವತಃ ಶಾರುಖ್ ಖಾನ್ ತನ್ನ ಜೊತೆ ಮಾತನಾಡಿ ಸುಸ್ವಾಗತ ಕೋರಿದರು ಎಂದು ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications