
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಶಿವಂ ದುಬೆ ತಂಡದ ಮೊದಲ ಗೆಲುವಿಗೆ ಕಾರಣವಾಗಿದ್ದಾರೆ. ರಾಬಿನ್ ಉತ್ತಪ್ಪ ಅವರೊಂದಿಗೆ ಮೂರನೇ ವಿಕೆಟ್‌ಗೆ 160ಕ್ಕೂ ಅಧಿಕ ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ದುಬೆ 95 ರನ್‌ಗಳ ಅಜೇಯ ಕೊಡುಗೆ ನೀಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಈ ಪಂದ್ಯದ ಬಳಿಕ ಮಾತನಾಡಿದ ಶಿವಂ ದುಬೆ ಸಿಎಸ್‌ಕೆ ಫ್ರಾಂಚೈಸಿ ತನಗೆ ನೀಡುತ್ತಿರುವ ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ.
ಮಂಗಳವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ದುಬೆ ಭರ್ಜರಿ 8 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಭರ್ಜರಿ 95 ರನ್‌ಗಳ ಕೊಡುಗೆ ನೀಡಿದ್ದಾರೆ. ಹೀಗಾಗಿ ಸಿಎಸ್‌ಕೆ ಇನ್ನಿಂಗ್ಸ್ ಅಂತ್ಯದಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್‌ಗಳಿಸಿತ್ತು. ರಾಬಿನ್ ಉತ್ತಪ್ಪ 88 ರನ್‌ಗಳಿಸಿದ್ದಾರೆ.
ತಂಡದ ಮ್ಯಾನೇಜ್‌ಮೆಂಟ್ ನನಗೆ ಭದ್ರತೆಯನ್ನು ಒದಗಿಸಿದೆ ಮಾತ್ರವಲ್ಲದೆ ನನ್ನ ಆಟಕ್ಕೆ ನನಗೆ ಬೆಂಬಲವನ್ನು ಕೂಡ ನೀಡಿದೆ. ಯಾವ ಎಸೆತವನ್ನು ನಾನು ಬಾರಿಸಬಹುದು ಎಂದು ನನಗೆ ಅನೊಸುತ್ತದೋ ಅದನ್ನು ನಾನು ದಂಡಿಸುತ್ತಿದ್ದೇನೆ. ನನಗೆ ಉತ್ತಮವಾಗಿ ಕನೆಕ್ಟ್ ಮಾಡಲು ಸಾಧ್ಯವಾಗುತ್ತಿದೆ. ಹಾಗಾಗಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ನಾನು ನನ್ನ ಸ್ವಂತ ಆಟವನ್ನಾಡಲು ಪ್ರಯತ್ನಿಸುತ್ತಿದ್ದೇನೆ" ಎಂದಿದ್ದಾರೆ ಶಿವಂ ದುಬೆ.
ಐಪಿಎಲ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋಲು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿಗಿಂತ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ ಅರ್ಹ ಗೆಲುವು ಸಂಪಾದಿಸಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿದೆ ರವೀಂದ್ರ ಜಡೇಜಾ ಬಳಗ.
ಫಾಫ್ ಡು ಪ್ಲೆಸಿಸ್ ಪಡೆ ಈ ಪಂದ್ಯದಲ್ಲಿ ಆರಂಭದಲ್ಲಿ ಉತ್ತಮ ಯಶಸ್ಸು ಸಾಧಿಸಿತಾದರೂ ಬಳಿಕ ಪಂದ್ಯದಲ್ಲಿ ಹಿಡಿತವನ್ನು ಕಳೆದುಕೊಳ್ಳಲು ಆರಂಭಿಸಿತು. ಅದರಲ್ಲೂ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಜೋಡಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಪುಡಿಗಟ್ಟುತ್ತಾ ಸಾಗಿದರು. ಹೀಗಾಗಿ ಆರ್‌ಸಿಬಿ ತಂಡಕ್ಕೆ ಬೃಹತ್ ಮೊತ್ತದ ಗುರಿಯನ್ನು ನಿಗದಿಪಡಿಸಿದರು. ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಅದ್ಭುತ ಪ್ರತಿರೋಧ ಆರ್‌ಸಿಬಿ ಪಾಳಯದಿಂದ ಬಂತು. ಆದರೆ ಅಂತಿಮವಾಗಿ 23 ರನ್‌ಗಳ ಅಂತರದ ಸೋಲು ಅನುಭವಿಸಿತು ಆರ್‌ಸಿಬಿ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಅನುಭವಿಸಿದ್ದು ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ಈ ಆರ್‌ಸಿಬಿ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಬಿದ್ದಿದೆ. ಮತ್ತೊಂದೆಡೆ ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.