ಐಪಿಎಲ್: ಪಿಚ್ ಕ್ಯಾಚ್ ಔಟ್ ಮೋಸ; ದೂರು ನೀಡಲು ಮುಂದಾದ ಕೇನ್ ವಿಲಿಯಮ್ಸನ್ ಬಳಗ!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವಿಶ್ವದ ಅತಿದೊಡ್ಡ ಹಾಗೂ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಈ ಟೂರ್ನಿ ನೀಡುವಷ್ಟು ಮನರಂಜನೆಯನ್ನು ವಿಶ್ವದ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಕೂಡ ನೀಡುವುದಿಲ್ಲ ಎಂದು ಹೇಳಬಹುದು. ಹೀಗೆ ಹಲವಾರು ಖ್ಯಾತಿಯನ್ನು ಸಂಪಾದಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೆಲ ವಿವಾದಗಳಿಗೂ ಸಹ ವೇದಿಕೆಯಾದ ಉದಾಹರಣೆಗಳಿವೆ.
ಹೌದು, ಈ ಹಿಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮೊದಲ ವಾರದಲ್ಲಿಯೇ ವಿವಾದವೊಂದಕ್ಕೆ ಸಾಕ್ಷಿಯಾಗಿದೆ. ಮಾರ್ಚ್ 29ರಂದು ಟೂರ್ನಿಯ ಐದನೇ ಪಂದ್ಯ ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 210 ರನ್‌ಗಳ ಬೃಹತ್ ಮೊತ್ತ ದಾಖಲಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 211 ರನ್‌ಗಳ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ತಲುಪುವಲ್ಲಿ ವಿಫಲವಾದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ 61 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು.
ಹೀಗೆ ಸೋತ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ 7 ಎಸೆತಗಳಿಗೆ 2 ರನ್ ಕಲೆಹಾಕಿ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ದೇವದತ್ ಪಡಿಕ್ಕಲ್‌ಗೆ ಕ್ಯಾಚ್ ನೀಡಿ ಔಟ್ ಆಗಿದ್ದದ್ದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಈ ವಿವಾದ ಇದೀಗ ದೂರಿನವರೆಗೂ ತಲುಪಿದ್ದು, ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ..

ಕ್ಯಾಚ್ ಹಿಡಿಯುವ ಮುನ್ನವೇ ನೆಲಕ್ಕೆ ತಾಕಿತ್ತಾ ಚೆಂಡು?
ಇನ್ನು ಪ್ರಸಿದ್ಧ್ ಕೃಷ್ಣ ಎಸೆದ ಎಸೆತವನ್ನು ವಿಲಿಯಮ್ಸನ್ ಬಾರಿಸಲು ಯತ್ನಿಸಿದಾಗ ಬ್ಯಾಟ್‌ಗೆ ತಗುಲಿದ್ದ ಚೆಂಡು ವಿಕೆಟ್ ಕೀಪರ್ ಸನಿಹ ಹಾರಿತ್ತು. ಈ ವೇಳೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯಲು ಯತ್ನಿಸಿದರೂ ಸಹ ಚೆಂಡು ಸಂಜು ಸ್ಯಾಮ್ಸನ್ ಕೈಗೆ ತಾಗಿ ಹಾರಿತ್ತು. ಈ ಸಂದರ್ಭದಲ್ಲಿ ಸ್ಲಿಪ್ ಫೀಲ್ಡರ್ ಆಗಿ ನಿಂತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ದೇವದತ್ ಪಡಿಕ್ಕಲ್ ಆ ಕ್ಯಾಚನ್ನು ಹಿಡಿಯಲು ಮುಂದಾದರು ಹಾಗೂ ಅಂಪೈರ್ ಅದನ್ನು ಔಟ್ ಎಂದು ಪರಿಗಣಿಸಿದ್ದರು. ಆದರೆ, ಈ ತೀರ್ಪನ್ನು ಕೇನ್ ವಿಲಿಯಮ್ಸನ್ ಒಪ್ಪದ ಕಾರಣ ಮೂರನೇ ಅಂಪೈರ್ ಕೆಎ ಅನಂತಪದ್ಮನಾಭನ್‌ಗೆ ತೀರ್ಪು ನೀಡುವತೆ ವರ್ಗಾಯಿಸಲಾಯಿತು. ಈ ವೇಳೆ ಚೆಂಡನ್ನು ಗಮನಿಸಿದ ಪ್ರತಿಯೊಬ್ಬರೂ ಸಹ ಚೆಂಡು ದೇವದತ್ ಪಡಿಕ್ಕಲ್ ಕೈಗೆ ಸಿಗುವ ಮುನ್ನವೇ ನೆಲಕ್ಕೆ ತಾಗಿದೆ ಹೀಗಾಗಿ ಇದು ನಾಟ್ಔಟ್ ಎಂಬ ಅಭಿಪ್ರಾಯವನ್ನು ಆ ಕ್ಷಣವೇ ವ್ಯಕ್ತಪಡಿಸಿದ್ದರು. ಆದರೆ, ಪ್ರೇಕ್ಷಕರ ಈ ಅಭಿಪ್ರಾಯಕ್ಕೆ ವಿರುದ್ಧವಾದ ತೀರ್ಪನ್ನು ನೀಡಿದ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು.

ದೂರು ನೀಡಲು ಮುಂದಾದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ
ಇನ್ನು ಕೇನ್ ವಿಲಿಯಮ್ಸನ್ ಔಟ್ ತೀರ್ಪಿನ ಕುರಿತು ಅಸಮಾಧಾನಗೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಲು ಮುಂದಾಗಿದೆ. ಈ ಕುರಿತಾಗಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದು, ಫ್ರಾಂಚೈಸಿ ಈಗಾಗಲೇ ಈ ಕುರಿತಾಗಿ ದೂರನ್ನು ನೀಡಿದೆ ಹಾಗೂ ಕೋಚ್ ಟಾಮ್ ಮೂಡಿ ತಮ್ಮ ಪಾಲಿನ ವರದಿ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಕೇನ್ ವಿಲಿಯಮ್ಸನ್ ಕೂಡ ತೀರ್ಪಿನ ವಿರುದ್ಧ ವರದಿಯಲ್ಲಿ ತಿಳಿಸಿದ್ದರು
ಇನ್ನು ಪಂದ್ಯ ಮುಕ್ತಾಯಗೊಂಡ ನಂತರ ಸಾಮಾನ್ಯವಾಗಿ ಇತ್ತಂಡಗಳ ನಾಯಕರು ಪಂದ್ಯದ ಕುರಿತಾದ ತಮ್ಮ ಪಾಲಿನ ವರದಿಯನ್ನು ಬರೆದು ಸಲ್ಲಿಸುತ್ತಾರೆ. ಅದೇ ರೀತಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಕ್ತಾವಾದ ನಂತರವೂ ಸಹ ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ಆ ವಿವಾದಾತ್ಮಕ ಕ್ಯಾಚ್ ಕುರಿತು ಕೂಡ ಉಲ್ಲೇಖಿಸಿದ್ದಾರೆ ಎಂದು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications