
ಐಪಿಎಲ್‌ನಲ್ಲಿ ಮಿಂಚು ಹರಿಸುತ್ತಿರುವ ಯುವ ವೇಗಿ ಉಮ್ರಾನ್ ಮಲಿಕ್ ತನ್ನ ನಿಖರ ದಾಳಿಯಿಂದಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ಅದರಲ್ಲೂ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದು ತಮ್ಮ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ಕು ವಿಕೆಟ್‌ಗಳು ಬೌಲ್ಡ್ ಆಗಿದ್ದವು ಎಂಬುದು ವಿಶೇಷ. ಈ ಅದ್ಭುತ ಪ್ರದರ್ಶನದ ಹೊರತಾಗಿಯೂ ಎಸ್‌ಆರ್‌ಹೆಚ್ ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಈ ಅದ್ಭುತ ಪ್ರದರ್ಶನ ನೀಡಿದ ಬಳಿಕ ಮಾತನಾಡಿದ ಯುವ ವೇಗಿ ಉಮ್ರಾನ್ ಮಲಿಕ್ ತಮ್ಮ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಗರಿಷ್ಠ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಉಮ್ರಾನ್ ಮಲಿಕ್ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಉಮ್ರಾನ್ ಮಲಿಕ್ ಗಂಟೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸುವುದು ನನ್ನ ಗುರಿಯಾಗಿದ್ದು ಭವಿಷ್ಯದಲ್ಲಿ ಖಂಡಿತಾ ಅದನ್ನು ನಾನು ಸಾಧಿಸಲಿದ್ದೇನೆ ಎಂದಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾಮ್ ಮಲಿಕ್ ತಮ್ಮ ಮೊದಲ ಸ್ಪೆಲ್‌ನಲ್ಲಿ ಪ್ರಮುಖ ಆಟಗಾರರಾದ ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮತ್ತು ಚೃದ್ದಿಮಾನ್ ಸಾಹಾ ವಿಕೆಟ್ ಕಬಳಿಸಿದರು. ನಂತರ 16 ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಯುವ ವೇಗಿ ಡೇವಿಡ್ ಮಿಲ್ಲರ್ ಹಾಗೂ ಅಭಿನವ್ ಮನೋಹರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಇಬ್ಬರು ಕೂಡ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದರು.
ಈ ಪಂದ್ಯದ ಮುಕ್ತಾಯದ ಬಳಿಕ 155 ಕಿ.ಮೀ ವೇಗದ ಬೌಲಿಂಗ್‌ನ ಗುರಿಯ ಬಗ್ಗೆ ಉಮ್ರಾನ್ ಮಲಿಕ್ ಅವರಲ್ಲಿ ಪ್ರಶ್ನಿಸಲಾಯಿಯತು. " ಗಂಟೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದು ದೇವರ ಇಚ್ಚೆಯಾಗಿದೆ. ಅದನ್ನು ನಾನು ಒಂದು ದಿನ ಖಂಡಿತಾ ಸಾಧಿಸಲಿದ್ದೇನೆ. ಆದರೆ ಈ ಕ್ಷಣದಲ್ಲಿ ನನ್ನ ಗುರಿ ಉತ್ತಮವಾಗಿ ಬೌಲಿಂಗ್ ದಾಳಿ ನಡೆಸುವುದಾಗಿದೆ" ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.
ಈ ಪಂದ್ಯ ಅಂತಿಮ ಓವರ್‌ನಲ್ಲಿ ರೋಚಕವಾಗಿ ಮುಕ್ತಾಯ ಕಂಡಿತು. ಅಂತಿಮ ಓವರ್‌ನಲ್ಲಿ ಗುಜರಾತ್ ಟೈಟನ್ಸ್ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ರಾಹುಲ್ ತೆವಾಟಿಯಾ ಸ್ಟ್ರೈಕ್‌ನಲ್ಲಿದ್ದರೆ ಮತ್ತೊಂದು ತುದಿಯಲ್ಲಿ ರಶೀದ್ ಖಾನ್ ಇದ್ದರು. ಮಾರ್ಕೋ ಜಾನ್ಸನ್ ಎಸೆದ ಈ ಓವರ್‌ನ ಮೊದಲ ಎಸೆತವನ್ನು ರಾಹುಲ್ ತೆವಾಟಿಯಾ ಸಿಕ್ಸರ್‌ಗೆ ಅಟ್ಟಿದ್ದರು. ಅದಾದ ಮುಂದಿನ ಎಸೆತದಲ್ಲಿ ಒಂದು ರನ್ ಬಂದಿತ್ತು. ಹೀಗಾಗಿ ರಶೀದ್ ಖಾನ್ ಸ್ಟ್ರೈಕ್‌ಗೆ ಬಂದಿದ್ದರು. ಮೂರನೇ ಎಸೆತವನ್ನು ರಶೀದ್ ಖಾನ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದ್ದರು.
ಮುಂದಿನ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಅಂತಿಮ ಎರಡು ಎಸೆತಗಳಲ್ಲಿ 9 ರನ್ ಗಳಿಸುವ ಸವಾಲು ಜಿಟಿ ಮುಂದಿತ್ತು. ಐದನೇ ಎಸೆತವನ್ನು ಕೂಡ ರಶೀದ್ ಖಾನ್ ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟಿದ್ದರು. ಕೊನೆಯ ಎಸೆತದಲ್ಲಿ ಗುಜರಾತ್ ಟೈಟನ್ಸ್ ಗೆಲುವಿಗೆ 3 ರನ್‌ಗಳ ಅಗತ್ಯವಿತ್ತು. ಓವರ್‌ನ ಅಂತಿಮ ಎಸೆತವನ್ನು ಕೂಡ ರಶೀದ್ ಖಾನ್ ಸಿಕ್ಸರ್‌ಗೆ ಅಟ್ಟುವ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ ರೋಚಕ ಗೆಲುವನ್ನು ತಂದಿತ್ತಿದ್ದಾರೆ. ಈ ಮೂಲಕ ಟೂರ್ನಿಯ ಮೊದಲ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಜಿಟಿ ಸೇಡು ತೀರಿಸಿಕೊಂಡಂತಾಗಿದೆ.