
ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 150 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಬೌಲರ್ ಭುವನೇಶ್ವರ್ ತಮ್ಮ ಕೊನೆಯ ಎಸೆತದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ಮೈಲಿಗಲ್ಲನ್ನು ತಲುಪಿದ್ದಾರೆ.
ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಎಸ್‌ಆರ್‌ಎಚ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ಪಂಜಾಬ್ ತಂಡದ ಮೇಲೆ ಮಾರಕ ಬೌಲಿಂಗ್ ದಾಳಿ ನಡೆಸುವ ಮೂಲಕ 150 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 22 ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಭುವನೇಶ್ವರ ಕುಮಾರ ಯಶಸ್ವಿಯಾದ್ರೆ, ಆರೆಂಜ್ ಆರ್ಮಿ ಏಳು ವಿಕೆಟ್‌ಗಳ ಜಯ ದಾಖಲಿಸುವಲ್ಲಿ ಸಫಲರಾದರು. ಈ ವಿಜಯದೊಂದಿಗೆ ಎಸ್‌ಆರ್‌ಎಚ್ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.
150 ವಿಕೆಟ್ ಪಡೆದ ನಾಲ್ವರು ಭಾರತೀಯರು
ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ, ಹರ್ಭಜನ್ ಸಿಂಗ್ ಮತ್ತು ಯುಜ್ವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್‌ಗಳ ಗಡಿದಾಟಿದ್ದಾರೆ. ಒಟ್ಟಾರೆ, ಇಬ್ಬರು ವಿದೇಶಿ ವೇಗಿಗಳು ಕೂಡ 150 ವಿಕೆಟ್‌ಗಳ ಗಡಿ ದಾಟಿದ್ದಾರೆ. ಡ್ವೇನ್ ಬ್ರಾವೋ 177 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ಲಸಿತ್ ಮಾಲಿಂಗ 170 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಭುವನೇಶ್ವರ್ ಈವರೆಗೂ 134 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಪಡೆಯುವ ಮೂಲಕ 6ನೇ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ 2016 ಮತ್ತು 2017 ರಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಮಾಡಿದ ದಾಖಲೆಯು ಸಹ ಅವರ ಹೆಸರಿನಲ್ಲಿದೆ. ಒಟ್ಟಾರೆಯಾಗಿ, ಅವರು ಎಸೆದ 514 ಓವರ್‌ಗಳಲ್ಲಿ 1333 ಡಾಟ್ ಬಾಲ್‌ಗಳಾಗಿವೆ.