
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಟೂರ್ನಿಯ ಮೇಲಿನ ಕುತೂಹಲಗಳು ಹೆಚ್ಚಾಗುತ್ತಿದೆ. ತಂಡಗಳ ಆಟಗಾರರ ಸಾಮರ್ಥ್ಯದ ಬಗ್ಗೆಯೂ ಸಾಕಷ್ಟು ಲೆಕ್ಕಾಚಾರಗಳನ್ನು ಅಭಿಮಾನಿಗಳು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗವಾಸ್ಕರ್ ಒಂದು ತಂಡ ಪರಿಣಾಮಕಾರಿ ಆಟಗಾರರನ್ನು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುನಿಲ್ ಗವಾಸ್ಕರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ. ಪಂಜಾಬ್ ಕಿಂಗ್ಸ್ ಸ್ಕ್ವಾಡ್ ವಿಚಾರವಾಗಿ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೊಹಾಲಿ ಮೂಲದ ತಂಡ ಪರಿಣಾಮಕಾರಿ ಆಟಗಾರರ ಪಡೆಯನ್ನು ಹೊಂದಿಲ್ಲ ಎಂದು ಹೇಳಿದ್ದು ಇದು ತಂಡಕ್ಕೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಪೋರ್ಟ್ ತಕ್ ಜೊತೆಗೆ ಮಾತನಾಡಿದ ಅವರು "ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲದ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಈ ಬಾರಿಯ ಟೂರ್ನಿಯಲ್ಲಿಯೂ ಅವರು ಪರಿಣಾಮಕಾರಿ ಆಟಗಾರರನ್ನು ಒಳಗೊಂಡ ಪಡೆಯನ್ನು ಹೊಂದಿದ್ದಾರೆ ಎನಿಸುತ್ತಿಲ್ಲ. ಮತ್ತೊಂದು ದೃಷ್ಟಿಕೋನದಿಂದ ನೋಡಿದರೆ ಇದು ಕೂಡ ತಂಡಕ್ಕೆ ನೆರವಾಗಲೂಬಹುದು. ಯಾವಾಗ ಕಡಿಮೆ ನಿರೀಕ್ಷೆಗಳು ಇರುತ್ತದೋ ಅಲ್ಲಿ ಬಹಳ ಕಡಿಮೆ ಒತ್ತಡಗಳು ಇರುತ್ತದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಒತ್ತಡಗಳು ಕಡಿಮೆಯಿದ್ದಾಗ ಆಟಗಾರರು ನಿರಾಳತೆಯಿಂದ ತಮ್ಮ ಆಟವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಆ ದೃಷ್ಟಿಯಿಂದ ನೋಡಿದರೆ ಪಂಜಾಬ್‌ನಿಂದ ಅಚ್ಚರಿಯ ಫಲಿತಾಂಶಗಳು ಬರಬಹುದು. ಆದರೆ ಅವರು ಟೂರ್ನಿಯನ್ನು ಗೆಲ್ಲಬಲ್ಲರೇ? ಆ ಬಗ್ಗೆ ನನಗೆ ಅನುಮಾನಗಳಿವೆ. ಈ ಟಿ20 ಮಾದರಿಯಲ್ಲಿ ನೀವು ಸ್ಥಿರವಾಗಿ ಗೆಲುವಿನ ಪ್ರದರ್ಶನ ನೀಡಬೇಕಾಗುತ್ತದೆ" ಎಂದು ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಹುದಾದ ತಂಡ ಯಾವುದು ಎಂಬುದನ್ನು ಸುನಿಲ್ ಗವಾಸ್ಕರ್ ಹೆಸರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗದ ತಂಡ ಈ ಬಾರಿಯ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬ ಭವಿಷ್ಯ ನುಡಿಯುವ ಮೂಲಕ ಸುನಿಲ್ ಗವಾಸ್ಕರ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು ಹೆಚ್ಚಿನ ಆಯ್ಕೆಗಳು ಡೆಲ್ಲಿ ತಂಡದಲ್ಲಿದೆ. ಇದು ತಂಡದ ಸಾಮರ್ಥ್ಯವನ್ನು ಖಂಡಿತಾ ಹೆಚ್ಚಿಸಲಿದೆ. ಹೀಗಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ರೋಫಿಯ ಮೇಲೆ ತನ್ನ ಹೆಸರನ್ನು ಬರೆಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಈ ಸಂದರ್ಭದಲ್ಲಿ ಭಾರತೀಯ ತಂಡದ ಯುವ ಆಟಗಾರನ ಬಗ್ಗೆ ಸುನಿಲ್ ಗವಾಸ್ಕರ್ ವಿಶೇಷ ಮಾತುಗಳನ್ನಾಡಿದ್ದು ಆತನ ಮೇಲೆ ವಿಶೇಷ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಆ ಯುವ ಆಟಗಾರ ಯಾರೂ ಅಲ್ಲ ರಿಷಭ್ ಪಂತ್. "ಕಳೆದ ಆವೃತ್ತಿಯಲ್ಲಿ ನಾಯಕನಾಗಿ ಪಡೆದುಕೊಂಡ ಅನುಭವ ರಿಷಭ್ ಪಂತ್‌ಗೆ ಈ ಬಾರಿ ಸಹಕಾರಿಯಾಗಲಿದೆ. ಈ ಮೂಲಕ ಅವರು ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆದುಕೊಳ್ಳಲಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಭಾರತ ತಂಡದ ಪರವಾಗಿ ಆ ನೀಡಿದ ಪ್ರದರ್ಶನ ಹಾಗೂ ಆತನ ಫಾರ್ಮ್ ಅದ್ಭುತವಾಗಿದೆ. ಆದು ಆತನಿಗೆ ಖಂಡಿತವಾಗಿಯೂ ಹೆಚ್ಚಿನ ಬಲ ನೀಡಲಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್