
ಈ ಬಾರಿಯ ಐಪಿಎಲ್‌ನಲ್ಲಿಯೂ ಕೆಎಲ್ ರಾಹುಲ್ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ರಾಹುಲ್ ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಿದ್ದು ವೈಯಕ್ತಿಕ ಪ್ರದರ್ಶನದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಕೆಎಲ್ ರಾಹುಲ್ ಬ್ಯಾಟಿಂಗ್ ಪ್ರದರ್ಶನದ ಬಳಿಕ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ರಾಹುಲ್‌ಗೆ ಹೊಸ ಕ್ರಮಾಂಕದ ಜವಾಬ್ಧಾರಿಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಆರಂಭಿಕ ಆಟಗಾರನಾಗಿ ಆಡುತ್ತಿದ್ದು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ ಕೆಎಲ್ ರಾಹುಲ್ ಫಿನಿಷರ್ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು ಎಂದು ಗವಾಸ್ಕರ್ ಸೂಚಿಸಿದ್ದಾರೆ. ಕೆಎಲ್ ರಾಹುಲ್ ಬತ್ತಳಿಕೆಯಲ್ಲಿ ಎಲ್ಲಾ ವಿಧದ ಹೊಡೆತಗಳು ಇದ್ದು ಫಿನಿಷರ್ ಆಗಿ ಕಾರ್ಯ ನಿರ್ವಹಿಸಲು ಹೆಚ್ಚಿನ ಅನುಕೂಲತೆಯನ್ನು ನೀಡಲಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಕೆಎಲ್ ರಾಹುಲ್ ಯಾವುದೇ ತಂಡದಲ್ಲಿದ್ದರೂ ಆ ತಂಡದ ಪ್ರಮುಖ ಭಾಗವಾಗಿರುತ್ತಾರೆ. ಅವರು ಆರಂಭಿಕನಾಗಿ ಕಣಕ್ಕಿಳೀದು 20 ಓವರ್‌ಗಳ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಾರೆ. ಆದರೆ ನನಗೆ ಅವರ ಆಟವನ್ನು ನೋಡಿದಾಗ ಅವರಲ್ಲಿ ಓರ್ವ ಉತ್ತಮ ಫಿನಿಷರ್ ಕೂಡ ಇದ್ದಾನೆ ಎಂದು ಭಾಸವಾಗುತ್ತದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಗವಾಸ್ಕರ್ ಸ್ಟಾರ್‌ಸ್ಪೋರ್ಟ್ಸ್ ಜೊತೆಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸುನಿಲ್ ಗವಾಸ್ಕರ್.

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಬಳಗ ಆರಂಭಿಕ ಆಘಾತದಿಂದ ಅದ್ಭುತ ರೀತಿಯಲ್ಲಿ ಚೇತರಿಸಿಕೊಂಡಿದೆ. ಈ ಮೂಲಕ ಎದುರಾಳಿ ತಂಡಕ್ಕೆ ಲಕ್ನೋ ಸವಾಲಿನ ಗುರಿ ನಿಗದಿಪಡಿಸುವಲ್ಲಿ ಯಶಸ್ವಿಯಾಯಿತು. ನಾಯಕ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಅವರ ನಿರ್ಣಾಯಕ ಪ್ರದರ್ಶನ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಸರೆಯಾಯಿತು. ನಿಗದಿತ 20 ಓವರ್‌ಗಳಲ್ಲಿ ಎಲ್‌ಎಸ್‌ಜಿ ತಂಡ 7 ವಿಕೆಟ್ ಕಳೆದುಕೊಂಡು 169 ರನ್‌ಗಳಿಸಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಲಕ್ನೋ ತಂಡ ಆರಂಭೀಕ ಆಘಾತವನ್ನು ಅನುಭವಿಸಿತು. ಪ್ರಮುಖ ಮೂರು ವಿಕೆಟ್‌ಗಳನ್ನು ಲಕ್ನೋ 27 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯನ್ನು ಎದುರಿಸಿತ್ತು. ಆದರೆ ನಾಯಕ ರಾಹುಲ್ ಹಾಗೂ ದೀಪಕ್ ಹೂಡಾ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರು ಆಟಗಾರರು ಕುಡ ತಲಾ ಅರ್ಧ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಕೆಎಲ್ ರಾಹುಲ್ 68 ರನ್‌ಗಳಿಸಿದರೆ ದೀಪಕ್ ಹೂಡಾ 51 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ.
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಆರಂಭದಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಎದುರಾಳಿಗೆ ಆಘಾತ ನೀಡಿದರು. ರೊಮಾರಿಯೋ ಶೆಫರ್ಡ್ ಹಾಗೂ ಟಿ ನಟರಾಜನ್ ಕೂಡ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ ಸವಾಲಿನ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಬೆನ್ನಟ್ಟಲು ಆರಂಭಿಸಿದೆ. ಟೂರ್ನಿಯಲ್ಲಿ ಹೈದರಾಬಾದ್ ಈವರೆಗೆ ಎರಡು ಪಂದ್ಯಗಳನ್ನಾಡಿದ್ದು ಎರಡರಲ್ಲಿಯೂ ಸೋಲು ಅನುಭವಿಸಿತ್ತು.