
ಐಪಿಎಲ್‌ನ ಸ್ಟಾರ್ ಆಟಗಾರ ಸುರೇಶ್ ರೈನಾ ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ತಂಡವೂ ಖರೀದಿಸದ ಪರಿಣಾಮವಾಗಿ ಹರಾಜಾಗದೆ ಉಳಿದುಕೊಂಡಿದ್ದಾರೆ. ಯಾವುದಾದರೂ ತಂಡ ಸುರೇಶ್ ರೈನಾ ಅವರನ್ನು ಬದಲಿ ಆಟಗಾರನಾಗಿ ಸೇರ್ಪಡೆಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿ ರೈನಾ ಅಭಿಮಾನಿಗಳಿದ್ದರು. ಆದರೆ ಈ ವಿಚಾರವಾಗಿಯೂ ಪೂರಕ ಬೆಳವಣಿಗೆಗಳು ನಡೆಯದಿರುವುದು ರೈನಾ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಆದರೆ ಈಗ ಸುರೇಶ್ ರೈನಾ ಐಪಿಎಲ್‌ಗೆ ಮರಳಲು ಸಜ್ಜಾಗಿದ್ದಾರೆ. ಆದರೆ ಬ್ಯಾಟ್ ಹಿಡಿದು ಅಲ್ಲ, ಬದಲಾಗಿ ಮೈಕ್ ಹಿಡಿದು. ಸುರೇಶ್ ರೈನಾ ಮಾತ್ರವಲ್ಲದೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಮೈಕ್ ಹಿಡಿದು ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ.
ಸುರೇಶ್ ರೈನಾ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದುಕೊಂಡಿದ್ದರೆ ರವಿ ಶಾಸ್ತ್ರಿ ಟಿ20 ವಿಶ್ವಕಪ್‌ನ ಬಳಿಕ ಭಾರತ ತಂಡದ ಕೋಚ್ ಹುದ್ದೆಯ ಅವಧಿ ಪೂರ್ಣಗೊಳಿಸಿ ಕೆಳಕ್ಕಿಳಿದಿದ್ದರು. ರವಿ ಶಾಸ್ತ್ರಿ ಐಪಿಎಲ್ ತಂಡದ ಕೋಚ್ ಹುದ್ದೆಗೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಒಂದೆರಡು ತಂಡಗಳು ಈ ವಿಚಾರವಾಗಿ ರವಿ ಶಾಸ್ತ್ರಿ ಅವರನ್ನು ಸಂಪರ್ಕಿಸಿದೆ ಎನ್ನಲಾಗುತ್ತು. ಆದರೆ ನಂತರ ಈ ವಿಚಾರವಾಗಿ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ.
ಇದೀಗ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಹಾಗೂ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಆವೃತ್ತಿಗೆ ಕಾಮೆಂಟೇಟರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರು ಕೂಡ ಹಿಂದಿ ಕಾಮೆಂಟೇಟರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. 2017ರಲ್ಲಿ ಕೋಚ್ ಆಗಿ ನೇಮಕವಾದ ಬಳಿಕ ರವಿ ಶಾಸ್ತ್ರಿ ಇದೇ ಮೊದಲ ಬಾರಿಗೆ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಕ್ರಿಕೆಟ್ ವೃತ್ತಿ ಜೀವನದ ಬಳಿಕ ಬಹುತೇಕ ಇಂಗ್ಲೀಷ್ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಿ ಸಾಕಷ್ಟು ಖ್ಯಾತರಾಗಿರುವ ರವಿ ಶಾಸ್ತ್ರಿ ಇದೇ ಮೊದಲ ಬಾರಿಗೆ ಹಿಂದಿ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಸುರೇಶ್ ರೈನಾ ಮೊದಲ ಬಾರಿಗೆ ಮೈಕ್ ಹಿಡಿದು ಪೂರ್ಣ ಪ್ರಮಾಣದ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ದೈನಿಕ್ ಜಾಗರಣ್ ಮಾಧ್ಯಮ ವರದಿ ಮಾಡಿದ್ದು ಐಪಿಎಲ್ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿದೆ. "ರೈನಾ ಈ ಬಾರಿಯ ಆವೃತ್ತಿಯಲ್ಲಿ ಆಡುತ್ತಿಲ್ಲ ಎಂಬುದು ನಿಮಗೆ ತಿಳಿದಿದೆ. ಆದರೆ ಅವರನ್ನು ಟೂರ್ನಿಯೊಂದಿಗೆ ಸಂಪರ್ಕದಲ್ಲಿರಿಸಿಕೊಳ್ಳಲು ನಾವು ಬಯಸುತ್ತಿದ್ದೇವೆ. ಅವರಿಗೆ ಅಗಾಧ ಪ್ರಮಾಣದ ಅಭಿಮಾನಿ ಬಳಗವಿದ್ದು ಅದೇ ಕಾರಣದಿಂದಾಗಿ ಅವರನ್ನು ಮಿಸ್ಟರ್ ಐಪಿಎಲ್ ಎಂದು ಕರೆಯಲಾಗುತ್ತದೆ. ಇನ್ನು ರವಿ ಶಾಸ್ತ್ರಿ ಇಂಗ್ಲೀಷ್ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದರು. ಆದರೆ ಭಾರತ ತಂಡದ ಕೋಚ್ ಆದ ಬಳಿಕ ಅವರು ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಿಲ್ಲ" ಎಂದು ಮೂಲಗಳ ಹೇಳಿಕೆಯನ್ನು ಜಾಗರಣ್ ಉಲ್ಲೇಖಿಸಿದೆ.