ಐಪಿಎಲ್ 2022 ಮೆಗಾ ಹರಾಜು: ಸುರೇಶ್ ರೈನಾ ಮೇಲೆ ಹಣದ ಹೊಳೆ ಹರಿಸಲಿವೆ ಈ 3 ಫ್ರಾಂಚೈಸಿಗಳು

ಯೋಜನೆಯ ಪ್ರಕಾರ ಮುಂಬರುವ ಮಾರ್ಚ್ 27ರಿಂದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಟೂರ್ನಿ ಆರಂಭಕ್ಕೆ ಇನ್ನೂ ಹಲವು ದಿನಗಳು ಬಾಕಿ ಇರುವಾಗಲೇ ಟೂರ್ನಿಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳು ಗರಿಗೆದರಿವೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹಲವಾರು ವಿಶೇಷತೆಗಳಿಂದ ಕೂಡಿರುವ ಕಾರಣದಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿರುವುದು ವಿಶೇಷವಾಗಿರಲಿದೆ.
ಈ ಬಾರಿಯ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಈ 2 ನೂತನ ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಡೆಸಲೇಬೇಕಾಗಿದೆ. ಅದರಂತೆ ಇದೇ ತಿಂಗಳ 12 ಹಾಗೂ 13ರಂದು ಬೆಂಗಳೂರಿನಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಮಹಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗೆ ಮೆಗಾ ಹರಾಜು ಪ್ರಕ್ರಿಯೆ ಸಮೀಪವಾಗುತ್ತಿದ್ದಂತೆ ಕುತೂಹಲಗಳು ಹಾಗೂ ಲೆಕ್ಕಾಚಾರಗಳು ಹೆಚ್ಚಾಗುತ್ತಿದ್ದು ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಖರೀದಿಸಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಲಿವೆ ಎಂಬ ಚರ್ಚೆಗಳು ನಡೆಯುತ್ತಿವೆ.
ಅದರಲ್ಲಿಯೂ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸನ್ನು ಸಾಧಿಸಿರುವ ತಂಡಗಳಲ್ಲಿ ಮುಂಚೂಣಿಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಪರ ಹೆಚ್ಚು ಆವೃತ್ತಿಗಳಲ್ಲಿ ಆಡಿರುವ ಪವರ್ ಹಿಟ್ಟರ್ ಸುರೇಶ್ ರೈನಾ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯಾವ ಫ್ರಾಂಚೈಸಿಯ ಪಾಲಾಗಲಿದ್ದಾರೆ ಎಂಬುದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಾರಿ ನಡೆದ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಹೊರಬಿದ್ದಿರುವ ಸುರೇಶ್ ರೈನಾ ಅವರ ಮೇಲೆ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಈ ಕೆಳಕಂಡ 3 ಫ್ರಾಂಚೈಸಿಗಳು ಕಣ್ಣಿಡಲಿವೆ.

1. ಚೆನ್ನೈ ಸೂಪರ್ ಕಿಂಗ್ಸ್
ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿಯನ್ನು ಪಡೆದಿರುವ ಸುರೇಶ್ ರೈನಾ 2008ರ ಬಳಿಕ ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ನೋಂದಾಯಿತರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅತಿ ಹೆಚ್ಚು ಕಣಕ್ಕಿಳಿದಿರುವ ಸುರೇಶ್ ರೈನಾ ತಮ್ಮ ತಂಡಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 2018ರಲ್ಲಿ ಎಂಎಸ್ ಧೋನಿ ಹಾಗೂ ರವೀಂದ್ರ ಜಡೇಜಾ ಜತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಿಟೈನ್ ಆಗಿದ್ದ ಸುರೇಶ್ ರೈನಾರನ್ನು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಫ್ರಾಂಚೈಸಿ ಕೈಬಿಡುವುದಿಲ್ಲ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸುರೇಶ್ ರೈನಾರನ್ನು ಚೆನ್ನೈ ಫ್ರಾಂಚೈಸಿ ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

2. ಲಕ್ನೋ ಸೂಪರ್ ಜೈಂಟ್ಸ್
ಚೆನ್ನೈ ಸುರೇಶ್ ರೈನಾ ಪಾಲಿಗೆ ಎರಡನೇ ಮನೆ ಆಗಿರಬಹುದು, ಆದರೆ ಸುರೇಶ್ ರೈನಾ ಲಕ್ನೋ ನಗರಕ್ಕೆ ಸೇರಿದವರಾಗಿರುವುದರಿಂದ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಫ್ರಾಂಚೈಸಿ ಸುರೇಶ್ ರೈನಾ ಅವರನ್ನು ಖರೀದಿಸಿದರೆ ಯಾವುದೇ ಅಚ್ಚರಿಯಿಲ್ಲ. ಅದರಲ್ಲಿಯೂ ನೂತನ ಫ್ರಾಂಚೈಸಿಯಾಗಿರುವ ಲಕ್ನೋಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿ ಅನುಭವವಿರುವಂತಹ ಆಟಗಾರರ ಅಗತ್ಯತೆ ಹೆಚ್ಚಿರುವ ಕಾರಣದಿಂದಾಗಿ ಸುರೇಶ್ ರೈನಾ ಅವರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ.

3. ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ಸಾಮಾನ್ಯವಾಗಿ ಯುವ ಕ್ರಿಕೆಟಿಗರಿಗೆ ಮೆಗಾ ಹರಾಜಿನಲ್ಲಿ ಹೆಚ್ಚಿನ ಹಣವನ್ನು ಹೂಡುವಂತಹ ಫ್ರಾಂಚೈಸಿ. ಅದರ ಜತೆಗೆ ಅನುಭವಿ ಆಟಗಾರರನ್ನು ಕೂಡಾ ತಂಡಕ್ಕೆ ಸೇರಿಸಿಕೊಳ್ಳುವ ರಾಜಸ್ಥಾನ್ ರಾಯಲ್ಸ್ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಈ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸಬಲ್ಲ ಆಟಗಾರರನ್ನು ಹೊಂದಿಲ್ಲದೇ ಇರುವ ಕಾರಣದಿಂದಾಗಿ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸುರೇಶ್ ರೈನಾ ಮೇಲೆ ಹೂಡಿಕೆ ಮಾಡುವುದು ಖಚಿತ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
