ಐಪಿಎಲ್ 2022 ಮೆಗಾ ಹರಾಜು: ಇಶಾನ್ ಕಿಶನ್ ಮೇಲೆ ಹಣದ ಹೊಳೆ ಹರಿಸಲಿವೆ ಈ 3 ಫ್ರಾಂಚೈಸಿಗಳು

ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಏಪ್ರಿಲ್ ತಿಂಗಳಿನಿಂದ ಆರಂಭವಾಗುತ್ತಿದ್ದು, ಈಗಾಗಲೇ ಟೂರ್ನಿಯ ಕುರಿತಾದ ಚಟುವಟಿಕೆಗಳು ಗರಿಗೆದರಿವೆ. ವಿವಿಧ ಫ್ರಾಂಚೈಸಿಗಳ ನಿರ್ದೇಶಕರು ಹಾಗೂ ಕೋಚ್ ಸಿಬ್ಬಂದಿ ಈಗಾಗಲೇ ಬೆಂಗಳೂರು ತಲುಪಿದ್ದು ಫೆಬ್ರವರಿ 12 ಮತ್ತು 13ರಂದು ಜರುಗಲಿರುವ ಮೆಗಾ ಹರಾಜಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.
ಈ 2 ದಿನಗಳ ಕಾಲ ನಡೆಯಲಿರುವ ಹರಾಜಿನಲ್ಲಿ ಫ್ರಾಂಚೈಸಿಗಳು ಪಂದ್ಯದ ಗತಿಯನ್ನು ಬದಲಾಯಿಸಬಲ್ಲಂತಹ ಆಟಗಾರರನ್ನು ಖರೀದಿಸುವತ್ತ ಹೆಚ್ಚಿನ ಒತ್ತು ನೀಡಲಿವೆ. ಹೀಗೆ ತನ್ನ ಅಬ್ಬರದ ಬ್ಯಾಟಿಂಗ್‌ನಿಂದ ಪಂದ್ಯದ ಫಲಿತಾಂಶವನ್ನು ಬದಲಾಯಿಸಬಲ್ಲಂತಹ ಸಾಮರ್ಥ್ಯವಿರುವ ಆಟಗಾರರ ಪೈಕಿ ಇಶಾನ್ ಕಿಶನ್ ಕೂಡ ಓರ್ವರು. ಕಳೆದ ವರ್ಷ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇಶಾನ್ ಕಿಶನ್ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಹಾಗೂ ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇಶಾನ್ ಕಿಶನ್ ತಮ್ಮ ಮೊದಲನೇ ಪಂದ್ಯದಲ್ಲಿಯೇ ವೇಗದ ಅರ್ಧಶತಕ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು.
ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿ ಉತ್ತಮ ಪ್ರದರ್ಶನ ನೀಡುವಂತಹ ಭರವಸೆಯನ್ನು ಮೂಡಿಸಿರುವ ಇಶಾನ್ ಕಿಶನ್ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಾನು ಪ್ರತಿನಿಧಿಸಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ರಿಟೈನ್ ಆಗದೇ ಇದೀಗ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೌದು, ಇಶಾನ್ ಕಿಶನ್ ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗವಹಿಸಲಿದ್ದು ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿರುವ ಈತನ ಮೇಲೆ ಹಲವಾರು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅದರಲ್ಲಿಯೂ ಈ ಕೆಳಕಂಡ 3 ಫ್ರಾಂಚೈಸಿಗಳು ಇಶಾನ್ ಕಿಶನ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಭಾರಿ ಪೈಪೋಟಿ ನಡೆಸಲಿವೆ.

1. ಮುಂಬೈ ಇಂಡಿಯನ್ಸ್
ಈ ಬಾರಿಯ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಕೀರನ್ ಪೊಲಾರ್ಡ್ ಈ 4 ಆಟಗಾರರನ್ನು ರಿಟೇನ್ ಮಾಡಿಕೊಂಡಿರುವ ಮುಂಬೈ ಇಂಡಿಯನ್ಸ್ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಇಶಾನ್ ಕಿಶನ್ ಅವರನ್ನು ಕೈಬಿಟ್ಟಿತ್ತು. ಹೀಗೆ ತಂಡದ ಪ್ರಮುಖ ಆಟಗಾರನಾಗಿ ಜವಾಬ್ದಾರಿಯುತ ಆಟವನ್ನು ಆಡುತ್ತಿದ್ದ ಇಶಾನ್ ಕಿಶನ್ ಅಗತ್ಯತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೆಚ್ಚಿದ್ದು ಈ ಬಾರಿಯ ಮೆಗಾ ಹರಾಜಿನಲ್ಲಿ ಪುನಃ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಕರೆತರಲು ಮುಂಬೈ ಇಂಡಿಯನ್ಸ್ ಹೆಚ್ಚಿನ ಬಿಡ್ ಮಾಡಲಿದೆ ಎನ್ನಲಾಗುತ್ತಿದೆ. ಇನ್ನು ಮುಂಬೈ ಇಂಡಿಯನ್ಸ್ ಪರ 45 ಪಂದ್ಯಗಳಲ್ಲಿ ಇಶಾನ್ ಕಿಶನ್ ಕಣಕ್ಕಿಳಿದು 1133 ರನ್ ಕಲೆಹಾಕಿದ್ದಾರೆ.

2. ಅಹ್ಮದಾಬಾದ್
ಮೊದಲಿಗೆ ಇಶಾನ್ ಕಿಶನ್ ಅವರನ್ನು ಅಹ್ಮದಾಬಾದ್ ಫ್ರಾಂಚೈಸಿ ಹರಾಜಿನ ಹೊರಗೆ ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ ಎಂಬ ಸುದ್ದಿಯಿತ್ತು. ಆದರೆ ನಂತರದ ದಿನಗಳಲ್ಲಿ ಇಶಾನ್ ಕಿಶನ್ ಬದಲು ಶುಬ್ಮನ್ ಗಿಲ್ ಅವರನ್ನು ಅಹ್ಮದಾಬಾದ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದ್ದು ಆಶ್ಚರ್ಯವನ್ನು ಮೂಡಿಸಿತ್ತು. ಇನ್ನು ಅಹ್ಮದಾಬಾದ್ ಫ್ರಾಂಚೈಸಿ ಇಶಾನ್ ಕಿಶನ್ ಅವರಿಗೆ ನೀಡಲು ಮುಂದಾಗಿದ್ದ ಹಣದ ಮೊತ್ತ ಇದರ ಮೇಲೆ ಪ್ರಭಾವವನ್ನು ಬೀರಿರಬಹುದು. ಅಹಮದಾಬಾದ್ ಫ್ರಾಂಚೈಸಿ ನೀಡಲು ಮುಂದಾಗಿದ್ದಕ್ಕಿಂತ ಹೆಚ್ಚು ಮೊತ್ತವನ್ನು ಇಶಾನ್ ಕಿಶನ್ ಮೆಗಾ ಹರಾಜಿನಲ್ಲಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೂ ಸಹ ಇಶಾನ್ ಕಿಶನ್ ಅಗತ್ಯತೆ ಇರುವ ನೂತನ ಫ್ರಾಂಚೈಸಿ ಅಹ್ಮದಾಬಾದ್ ಈ ಬಾರಿಯ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಖರೀದಿಸಲು ಇತರೆ ಫ್ರಾಂಚೈಸಿಗಳ ಜತೆ ಜಿದ್ದಿಗೆ ಬೀಳಲಿದೆ ಎನ್ನಲಾಗುತ್ತಿದೆ. ಇನ್ನು ಈಶಾನ್ ಕಿಶನ್ ಪಕ್ಕಾ ಸ್ನೇಹಿತನಾದ ಹಾರ್ದಿಕ್ ಪಾಂಡ್ಯ ಅಹ್ಮದಾಬಾದ್ ತಂಡಕ್ಕೆ ನಾಯಕನಾಗಲಿದ್ದು ಅಹ್ಮದಾಬಾದ್ ಫ್ರಾಂಚೈಸಿ ಇಶಾನ್ ಕಿಶನ್ ಅವರನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ.

3. ಪಂಜಾಬ್ ಕಿಂಗ್ಸ್
ಇಶಾನ್ ಕಿಶನ್ ಮೇಲೆ ಹಲವಾರು ಫ್ರಾಂಚೈಸಿಗಳು ಬಿಡ್ ಮಾಡಲಿದ್ದು, ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳ ಪೈಕಿ ಅತಿ ಹೆಚ್ಚು ಉಳಿಕೆ ಮೊತ್ತವನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ದೊಡ್ಡ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications