
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ಬಾರಿ ಎರಡು ಹೊಸ ತಮಡಗಳು ಟೂರ್ನಿಗೆ ಸೇರ್ಪಡೆಯಾಗಿದ್ದು ಹತ್ತು ತಂಡಗಳ ನಡುವಿನ ಕಾದಾಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಬಾರಿ ಐಪಿಎಲ್‌ಗೆ ಸೇರ್ಪಡೆಯಾಗಿರುವ ಎರಡು ಹೊಸ ತಂಡಗಳ ಪೈಕಿ ಗುಜರಾತ್ ಟೈಟನ್ಸ್ ಕೂಡ ಒಂದಾಗಿದ್ದು ಬಲಿಷ್ಠ ಆಟಗಾರರ ಪಡೆಯೊಂದಿಗೆ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇನ್ನು ಗುಜರಾತ್ ಟೈಟನ್ಸ್ ತಂಡ ನಾಯಕತ್ವ ಹಾರ್ದಿಕ್ ಪಾಂಡ್ಯ ಹೆಗಲಿಗೆ ಬಿದ್ದಿದ್ದು ಆಲ್‌ರೌಂಡರ್ ಆಟಗಾರನ ನಾಯಕತ್ವ ಹೇಗಿರಲಿದೆ ಎಂಬ ಕುತೂಹಲ ಎಲ್ಲಾ ಐಪಿಎಲ್ ಅಭಿಮಾನಿಗಳಲ್ಲಿದೆ. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಕ್ರಿಕೆಟ್‌ನ ನಿರ್ದೇಶಕ ವಿಕ್ರಂ ಸೋಲಂಕಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಾಯಕನಾಗಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗುವ ಎಲ್ಲಾ ಅರ್ಹತೆಗಳನ್ನು ಕೂಡ ಹೊಂದಿದ್ದಾರೆ ಎಂದು ಸೋಲಂಕಿ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು. ಹೀಗಾಗಿ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್ ಫ್ರಾಂಚೈಸಿ 15 ಕೋಟಿಗೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿ ನಾಯಕನನ್ನಾಗಿ ನೇಮಿಸಿದೆ. ಬರೋಡಾ ಮೂಲದ ಹಾರ್ದಿಕ್ ಪಾಂಡ್ಯ ಈವರೆಗೆ ನಾಯಕನಾಗು ಯಾವುದೇ ಅನುಭವ ಹೊಂದಿಲ್ಲ ಎಂಬುದು ಗಮನಾರ್ಹ ಅಂಶ.
ಆದರೆ ಗುಜರಾತ್ ಟೈಟನ್ಸ್ ತಂಡದ ನಿರ್ದೇಶಕ ವಿಕ್ರಂ ಸೋಲಂಕಿ ಹಾರ್ದಿಕ್ ಪಾಂಡ್ಯ ಅವರು ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಂದ ಕಲಿತುಕೊಂಡಿರುವ ಪಾಠಗಳು ನಾಯಕನಾಗಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಲು ಸಹಾಯಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಹಾರ್ದಿಕ್ ಪಾಂಡ್ಯ ಅವರಲ್ಲಿರುವ ಗುಣಮಟ್ಟವನ್ನು ನಾವು ಗಮನಸಿದ್ದೇವೆ. ಅದು ಅವರನ್ನು ಯಶಸ್ವೀ ನಾಯಕನನ್ನಾಗು ಮಾಡಲಿದೆ" ಎಂದಿದ್ದಾರೆ ಸೋಲಂಕಿ.
ಇನ್ನು ಕಳೆದ ಟಿ20 ವಿಶ್ವಕಪ್‌ನ ಬಳಿಕ ಹಾರ್ದಿಕ್ ಪಾಂಡ್ಯ ಸ್ಪರ್ದಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಫಿಟ್‌ನೆಸ್ ಸಮಸ್ಯೆಯ ಕಾರಣದಿಂದಾಗಿ ಹಾರ್ದಿಕ್ ಟೀಮ್ ಇಂಡಿಯಾಗೆ ಆಯ್ಕೆಯಾಗಿರಲಿಲ್ಲ. ರಣಜಿ ಟೂರ್ನಿಯಿಂದಲೂ ಹಾರ್ದಿಕ್ ಪಾಂಡ್ಯ ಹಿಂದಕ್ಕೆ ಸರಿದಿದ್ದರು. ಹೀಗಾಗಿ ಮಾರ್ಚ್ 26ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.