
ಐಪಿಎಲ್ 2022 ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ತನ್ನ ಹೊಸ ನಾಯಕನ್ನನು ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ವಿರಾಟ್ ಕೊಹ್ಲಿ ಕಳೆದ ಆವೃತ್ತಿಯ ನಂತರ ನಾಯಕ್ವದಿಂದ ಕೆಳಗಿಳಿದ ಬಳಿಕ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಇದೀಗ ಅಧಿಕೃತ ಉತ್ತರ ಲಭ್ಯವಾಗಿದೆ. ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನನ್ನಾಗಿ ಹೆಸರಿಸಿದೆ.
ಆರ್‌ಸಿಬಿ ತಂಡದ ನೂತನ ನಾಯಕನನ್ನು ಆರ್‌ಸಿಬಿ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ನಾಯಕನಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಮಾಜಿ ನಾಯಕ ಹಾಗೂ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಕೂಡ ನೂತನ ನಾಯಕನಿಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
"ನಾವು ಬಹಳ ವರ್ಷಗಳಿಂದ ಸಂಪರ್ಕದಲ್ಲಿದ್ದೇವೆ, ಕ್ರಿಕೆಟ್ ಹೊರತುಪಡಿಸಿ ಹೆಚ್ಚಾಗಿ ತಿಳಿದುಕೊಂಡವರ ಪೈಕಿ ಫಾಫ್ ಕೂಡ ಒಬ್ಬರು" ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ 7ನೇ ನಾಯಕನಾಗಿ ಶನಿವಾರ ನೇಮಕಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎಲ್ಲಾ ಮಾದರಿಯಲ್ಲಿಯೂ ಮುನ್ನಡೆಸಿದ ಅನುಭವ ಹೊಂದಿರುವ ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ತಂಡವೊಮದರ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯ ದ್ವಿತಿಯಾರ್ಧದ ಪಂದ್ಯಗಳೂ ಆರಂಭವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಮುಂದಿನ ಆವೃತ್ತಿಯಿಂದ ನಾನು ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಘೋಷಣೆ ಮಾಡಿದ್ದರು. ನಾಯಕತ್ವದ ಜವಾಬ್ಧಾರಿಯಿಂದ ಕೆಳಗಿಳಿದು ಸಂಪೂರ್ಣವಾಗಿ ಬ್ಯಾಟಿಂಗ್ ಕಡೆಗೆ ಗಮನಹರಿಸಲು ಬಯಸುವುದಾಗಿ ಹೇಳಿದ್ದರು.
ಇನ್ನು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ದಶಕಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದರು. ಈ ಬಾರಿಯ ಹರಾಜಿಗೆ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆಗೊಳಿಸಿದ್ದ ಸಿಎಸ್‌ಕೆ ಜೊತೆಗೆ ಮೆಗಾ ಹರಾಜಿನಲ್ಲಿ ಪೈಪೋಟಿಗೆ ಇಳಿದ ಆರ್‌ಸಿಬಿ 7 ಕೋಟಿ ರೂಪಾಯಿ ಬಿಡ್ ಮಾಡುವ ಮೂಲಕ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
"ನಾವು ಉತ್ತಮವಾಗಿ ಹೊಂದಾಣಿಕೆಯಾಗುತ್ತೇವೆ. ಆತನ ನಾಯಕತ್ವದ ಕೆಳಗೆ ಆಡುವುದು, ಫಾಫ್ ಜೊತೆಗೆ ಜೊತೆಯಾಟ ಹಾಗೂ ರೀಟೈನ್ ಮಾಡಿಕೊಂಡಿರುವ ಕೋರ್ ತಂಡದೊಂದಿಗಿನ ಹೊಂದಾಣಿಗೆ ಅಭಿಮಾನಿಗಳಿಗೆ ಉತ್ಸುಕತೆಯನ್ನು ನೀಡುತ್ತಿದೆ" ಎಂದಿ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿಯ ಈ ಬಾರಿಯ ತಂಡ ಉತ್ತಮ ಹೊಂದಾಣಿಕೆಯಿಂದ ಕೂಡಿದೆ ಎಂಬ ಅಭಿಪ್ರಾಯವನ್ನು ಕುಡ ವ್ಯಕ್ತಪಡಿಸಿದ್ದಾರೆ.
"ಈ ಬಾರಿಯ ಆರ್‌ಸಿಬಿ ತಂಡ ಸಮತೋಲಿತವಾಗಿದ್ದು ಬಲಿಷ್ಠವಾಗಿದೆ. ಟೂರ್ನಿಯ ಆರಂಭಕ್ಕೆ ನಾನು ಉತ್ಸುಕನಾಗಿದ್ದು ಫಾಫ್ ಹಾಗೂ ತಂಡದ ಇತರ ಸದಸ್ಯರೊಂದಿಗೆ ಕೂಡಿಕೊಳ್ಳಲು ಕಾಯುತ್ತಿದ್ದೇನೆ. ಈ ಆವೃತ್ತಿಗಾಗಿ ನಾನು ನಿಜಕ್ಕೂ ಎದುರುನೋಡುತ್ತಿದ್ದೇನೆ" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಆರ್‌ಸಿಬಿ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್