IPL 2022: ಸಾಲು ಸಾಲು ಸೋಲು ಕಂಡ ಮುಂಬೈ ಇಂಡಿಯನ್ಸ್ ಗೆಲ್ಲಲು ಈತ ಕಣಕ್ಕಿಳಿಯಲೇಬೇಕು ಎಂದ ಸೆಹ್ವಾಗ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಈ ಬಾರಿಯ ಟೂರ್ನಿಯಲ್ಲಿಯೂ ಸಹ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಹೌದು, ಐದು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿರುವ ಬಲಿಷ್ಟ ಮುಂಬೈ ಇಂಡಿಯನ್ಸ್ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದ ನಂತರ ಈ ಬಾರಿಯೂ ಸಹ ಅದೇ ರೀತಿ ಟೂರ್ನಿಯಲ್ಲಿನ ತನ್ನ ಮೊದಲ 3 ಪಂದ್ಯಗಳಲ್ಲಿ ಸೋತು ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೊಳಗಾಗಿದೆ.
ಈ ಬಾರಿ ಪಾಂಡ್ಯ ಬ್ರದರ್ಸ್ ಇಲ್ಲದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲಿಯೂ ಸಹ ಹಿನ್ನಡೆಯನ್ನು ಅನುಭವಿಸಿದ್ದು, ಸದ್ಯ ತಂಡದಲ್ಲಿ ಜಸ್ಪ್ರಿತ್ ಬುಮ್ರಾ ಹೊರತುಪಡಿಸಿ ಬೇರೆ ಯಾವುದೇ ವೇಗಿ ಕೂಡ ಉತ್ತಮ ಪ್ರದರ್ಶನ ನೀಡಬಲ್ಲ ನಿರೀಕ್ಷೆಯನ್ನು ಹುಟ್ಟುಹಾಕಿಲ್ಲ. ಇನ್ನು ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಬಸಿಲ್ ತಂಪಿ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದರಾದರೂ ನಂತರದ ಎರಡು ಪಂದ್ಯಗಳಲ್ಲಿ ಹೆಚ್ಚಿನ ರನ್ ನೀಡಿ ದುಬಾರಿಯಾದರು. ಇನ್ನು ತಂಡದಲ್ಲಿರುವ ಟೈಮಲ್ ಮಿಲ್ಸ್ ಮತ್ತು ಡೇನಿಯಲ್ ಸ್ಯಾಮ್ಸ್ ನಿರೀಕ್ಷಿಸಿದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಹೀಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡಬಲ್ಲ ಬೌಲರ್‌ನ ಅಗತ್ಯವಿದ್ದು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಈ ಕುರಿತಾಗಿ ಮಾತನಾಡಿ ಮುಂಬೈ ಇಂಡಿಯನ್ಸ್ ಆಟಗಾರನೋರ್ವನಿಗೆ ಆಡುವ ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಈ ಕೆಳಕಂಡಂತಿದೆ..

ಈ ಹಿಂದೆ ಮುಂಬೈಗೆ ಚಿಂತೆ ಇರಲಿಲ್ಲ
ಮುಂಬೈ ಇಂಡಿಯನ್ಸ್ ಕುರಿತು ಮಾತನಾಡಿರುವ ವಿರೇಂದ್ರ ಸೆಹ್ವಾಗ್ "ಕಳೆದ ವರ್ಷದವರೆಗೂ ಮುಂಬೈ ಇಂಡಿಯನ್ಸ್‌ನಲ್ಲಿ ನಾಥನ್ ಕೌಲ್ಟರ್ ನೈಲ್ ಇದ್ದರು. ಯಾರಾದೂ ವೇಗಿ ಕಳಪೆ ಪ್ರದರ್ಶನ ನೀಡಿದರೆ ಅಥವಾ ಗಾಯದ ಸಮಸ್ಯೆಗೊಳಗಾದರೆ ನಾಥನ್ ಕೌಲ್ಟರ್ ನೈಲ್ ಕಣಕ್ಕಿಳಿಯುತ್ತಿದ್ದರು. ಆದರೆ, ಈಗಿನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೆಂಚ್ ಕಾಯುತ್ತಿರುವ ಆಟಗಾರರನ್ನು ಕಣಕ್ಕಿಳಿಸಲು ನೋಡಿದರೆ ಎರಡು ಬಾರಿ ಯೋಚಿಸುವಂತಾಗಿದೆ" ಎಂದಿದ್ದಾರೆ.

ಬಸಿಲ್ ಥಂಪಿ ಮತ್ತು ಸ್ಯಾಮ್ಸ್ ಸ್ಥಾನ ತುಂಬಬಲ್ಲ ಆಟಗಾರರಿಲ್ಲ
ಮಯಾಂಕ್ ಮಾರ್ಕಂಡೆ, ಜಯದೇವ್ ಉನದ್ಕತ್, ರಿಲೆ ಮೆರೆಡಿತ್ ಮತ್ತು ಅರ್ಷದ್ ಖಾನ್ ಮುಂಬೈ ಇಂಡಿಯನ್ಸ್ ಪರ ಬೆಂಚ್ ಕಾಯುತ್ತಿದ್ದು, ಇವರ ಜೊತೆಗೆ ಸಂಜಯ್ ಯಾದವ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್ ಕೂಡ ಇದ್ದಾರೆ ಎಂದಿರುವ ವಿರೇಂದ್ರ ಸೆಹ್ವಾಗ್ ಈ ಆಟಗಾರರು ಬಸಿಲ್ ಥಂಪಿ ಮತ್ತು ಡೇನಿಯಲ್ ಸ್ಯಾಮ್ಸ್ ಸ್ಥಾನ ತುಂಬಬಲ್ಲ ಆಟಗಾರರಲ್ಲ ಎಂದು ಹೇಳಿದ್ದಾರೆ.

ಇರುವ ಬೌಲರ್‌ಗಳಲ್ಲಿ ಈತ ಕಣಕ್ಕಿಳಿಯಬಹುದು
ಇನ್ನೂ ಮುಂದುವರೆದು ಮಾತನಾಡಿರುವ ವಿರೇಂದ್ರ ಸೆಹ್ವಾಗ್ ಲಭ್ಯವಿರುವ ಬೌಲರ್‌ಗಳಲ್ಲಿ ಜಯದೇವ್ ಉನಾದ್ಕತ್ ಮಾತ್ರ ಅನುಭವಿ ಆಟಗಾರನಾಗಿದ್ದು, ಈ ಹಿಂದಿನ ಆವೃತ್ತಿಯೊ೦ದರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡಿ ನಂತರ 2018ರ ಹರಾಜಿನಲ್ಲಿ 11.5 ಕೋಟಿ ಪಡೆದಿದ್ದರು ಎಂದಿದ್ದಾರೆ. ಹೀಗಾಗಿ ಇರುವ ಬೌಲರ್‌ಗಳ ಪೈಕಿ ಜಯದೇವ್ ಉನಾದ್ಕತ್ ಬುಮ್ರಾಗೆ ಸಾಥ್ ನೀಡಬಲ್ಲ ಬೌಲರ್ ಆಗಿದ್ದಾರೆ ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ಇನ್ನು 30 ವರ್ಷದ ಜಯದೇವ್ ಉನಾದ್ಕತ್ 86 ಐಪಿಎಲ್ ಪಂದ್ಯಗಳನ್ನಾಡಿದ್ದು, 85 ವಿಕೆಟ್ ಪಡೆದಿದ್ದು, 8.74 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications