ಬಿಸಿಸಿಐ ಮಾತ್ರವಲ್ಲ ಈತನಿಗೆ ಆರ್‌ಸಿಬಿ ಕೂಡ ಕೈಕೊಟ್ಟಿತು ಎಂದು ಕಿಡಿಕಾರಿದ ಮಾಜಿ ಕ್ರಿಕೆಟಿಗ

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಮುಗಿದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳ ಪೈಕಿ ಎರಡರಲ್ಲಿಯೂ ಕಿವೀಸ್ ವಿರುದ್ಧ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ನೆಲದಲ್ಲಿಯೂ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಯೋಜನೆಯಲ್ಲಿದೆ. ಹೌದು, ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾ ತಲುಪಿ ಸದ್ಯ ಪಂಚತಾರಾ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಟೀಮ್ ಇಂಡಿಯಾ ಆಟಗಾರರು ಡಿಸೆಂಬರ್ 19ರ ಭಾನುವಾರದಿಂದ ಅಭ್ಯಾಸವನ್ನು ಆರಂಭಿಸಲಿದ್ದು ಡಿಸೆಂಬರ್ 26ರಿಂದ ಇತ್ತಂಡಗಳ ನಡುವಿನ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು ಈ ಸರಣಿಯಲ್ಲಿ ಗೆಲುವು ಸಾಧಿಸುವುದರ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸುವ ತವಕದಲ್ಲಿದೆ. ಹೌದು, ಇದುವರೆಗೂ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಯನ್ನಾಡಿರುವ ಟೀಮ್ ಇಂಡಿಯಾ ಇದುವರೆಗೂ ಒಂದೇ ಒಂದು ಬಾರಿಯೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹೀಗೆ ಇಷ್ಟು ವರ್ಷಗಳಲ್ಲಿ ಸಾಧಿಸಲಾಗದ ಐತಿಹಾಸಿಕ ಸಾಧನೆಯನ್ನು ಈ ಬಾರಿ ಮಾಡಬೇಕೆಂದು ಹೊರಟಿರುವ ಟೀಮ್ ಇಂಡಿಯಾ ತನ್ನ ತಂಡದಲ್ಲಿ ಪ್ರತಿಭಾವಂತ ಆಟಗಾರನೊಬ್ಬನಿಗೆ ಅವಕಾಶವನ್ನು ನೀಡಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಉತ್ತಮ ಪ್ರದರ್ಶನ ನೀಡಿದರೂ ಕೂಡ ಬಿಸಿಸಿಐ ವಾಷಿಂಗ್ಟನ್ ಸುಂದರ್ ಅವರಿಗೆ ತಕ್ಕ ಬೆಲೆಯನ್ನು ನೀಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ "ವಾಷಿಂಗ್ಟನ್ ಸುಂದರ್ ಕುರಿತಾಗಿ ಯಾರೊಬ್ಬರೂ ಸಹ ದನಿ ಎತ್ತಲ್ಲ. ಆಯ್ಕೆಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಜಯಂತ್ ಯಾದವ್ ಅವರನ್ನು ಆಯ್ಕೆ ಮಾಡಿದರು, ಆದರೆ ವಾಷಿಂಗ್ಟನ್ ಸುಂದರ್ ಕುರಿತಾಗಿ ಯಾವುದೇ ಚರ್ಚೆಗಳು ನಡೆಯಲೇ ಇಲ್ಲ" ಎಂದು ಅಸಮಾಧಾನ ಹೊರಹಾಕಿದ್ದು ವಾಷಿಂಗ್ಟನ್ ಸುಂದರ್ ಕುರಿತಾಗಿ ಇನ್ನೂ ಮುಂದುವರೆದು ಈ ಕೆಳಕಂಡಂತೆ ಮಾತನಾಡಿದರು..

ಗಬ್ಬಾ ಟೆಸ್ಟ್‌ನಲ್ಲಿ ಸುಂದರ್ ನೀಡಿದ ಪ್ರದರ್ಶನವನ್ನು ಮರೆತುಹೋದರಾ?
ಹೀಗೆ ವಾಷಿಂಗ್ಟನ್ ಸುಂದರ್ ಕುರಿತಾಗಿ ಯಾರೂ ಕೂಡಾ ದನಿ ಎತ್ತುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಆಕಾಶ್ ಚೋಪ್ರಾ ಈ ಹಿಂದೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡು ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದಾಗ ವಾಷಿಂಗ್ಟನ್ ಸುಂದರ್ ನೀಡಿದ್ದ ಪ್ರದರ್ಶನವನ್ನು ಮೆಲುಕು ಹಾಕಿದ್ದಾರೆ. "ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ರಿಷಭ್ ಪಂತ್ ನೀಡಿದ ಅಮೋಘ ಪ್ರದರ್ಶನದಿಂದ ಟೀಮ್ ಇಂಡಿಯಾ ಗೆದ್ದಿದ್ದು ನಿಜ. ಆದರೆ ಅದೇ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಹಲವಾರು ರನ್ ಗಳಿಸಿದ್ದರು ಎಂಬುದನ್ನು ಮರೆಯುವ ಹಾಗಿಲ್ಲ. ಮತ್ತು ಸುಂದರ್ ಆ ಪಂದ್ಯದಲ್ಲಿ ಕೆಲ ವಿಕೆಟ್‍ಗಳನ್ನೂ ಸಹ ಕಬಳಿಸಿದ್ದರು" ಎಂದು ಆಕಾಶ್ ಚೋಪ್ರಾ ಹೇಳಿಕೆ ನೀಡಿದ್ದಾರೆ.

ಅಕ್ಷರ್, ಜಡೇಜಾ ಗಾಯಕ್ಕೊಳಗಾದರೂ ಸಹ ವಾಷಿಂಗ್ಟನ್ ಸುಂದರ್‌ಗೆ ಮಾತ್ರ ಅವಕಾಶವಿಲ್ಲ
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿಲ್ಲ. ಹೀಗಿದ್ದರೂ ಸಹ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡದೇ ಇರುವುದು ಸರಿಯಾದ ನಿರ್ಧಾರವಲ್ಲ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಕೊಡುಗೆ ನೀಡುವಂತಹ ಆಟಗಾರರು ತಂಡದಲ್ಲಿದ್ದರೆ ಉತ್ತಮ, ಹೀಗಾಗಿ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಬೇಕಿತ್ತು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕುರಿತು ಆಕಾಶ್ ಚೋಪ್ರಾ ಬೇಸರ
ಇನ್ನು ಈ ಬಾರಿಯ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಾಷಿಂಗ್ಟನ್ ಸುಂದರ್ ಅವರನ್ನು ಉಳಿಸಿಕೊಳ್ಳದೇ ಇರುವುದರ ಕುರಿತು ಕೂಡ ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದರೂ ಕೂಡ ಬೆಂಗಳೂರು ಫ್ರಾಂಚೈಸಿ ವಾಷಿಂಗ್ಟನ್ ಸುಂದರ್ ಅವರನ್ನು ಕಡೆಗಣಿಸಿದ್ದು ಒಳ್ಳೆಯ ಆಲ್ ರೌಂಡರ್ ಆಗಿರುವ ಸುಂದರ್ ಮುಂಬರಲಿರುವ ಆಟಗಾರರ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications