IPL 2022: ಶೇನ್ ವಾರ್ನ್ ಈಗ ನಮ್ಮನ್ನು ಹೆಮ್ಮೆಯಿಂದ ನೋಡುತ್ತಿರುತ್ತಾರೆ ಎಂದ ಬಟ್ಲರ್

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದಿದ್ದು ನಾಳೆ ( ಮೇ 29 ) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆಬೀಳಲಿದೆ.
ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ನೇರವಾಗಿ ಫೈನಲ್ ಪ್ರವೇಶ ಪಡೆದುಕೊಂಡರೆ, ಈ ಪಂದ್ಯದಲ್ಲಿ ಸೋತು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೋಬ್ಬರಿ 13 ವರ್ಷಗಳ ಬಳಿಕ ರಾಜಸ್ಥಾನ್ ರಾಯಲ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳುತ್ತ ಚಿತ್ತ ನೆಟ್ಟಿದೆ.
ನಿರ್ಣಾಯಕ ಪಂದ್ಯವಾಗಿದ್ದ ಎರಡನೇ ಕ್ವಾಲಿಫೈಯರ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 158 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ. ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಶತಕ ಸಿಡಿಸಿದ ಜೋಸ್ ಬಟ್ಲರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಮತ್ತೊಮ್ಮೆ ತಂಡಕ್ಕೆ ಆಪತ್ಬಾಂಧವರಾದರು. ಪಂದ್ಯ ಮುಗಿದ ನಂತರ ಗೆಲುವಿನ ಕುರಿತು ಮಾತನಾಡಿದ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಹಾಗೂ ಕೋಚ್ ಆಗಿದ್ದ ಶೇನ್ ವಾರ್ನ್ ಅವರನ್ನು ಈ ಕೆಳಕಂಡಂತೆ ಸ್ಮರಿಸಿದ್ದಾರೆ.

ನಮ್ಮನ್ನು ಹೆಮ್ಮೆಯಿಂದ ನೋಡುತ್ತಿರುತ್ತಾರೆ
"ಶೇನ್ ವಾರ್ನ್ ಅವರು ರಾಜಸ್ಥಾನ್ ರಾಯಲ್ಸ್‌ಗೆ ಪ್ರಭಾವಿ ವ್ಯಕ್ತಿಯಾಗಿದ್ದರು ಮತ್ತು ಮೊದಲ ಋತುವಿನಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದರು. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಆದರೆ ಅವರು ಇಂದು ನಮ್ಮನ್ನು ತುಂಬಾ ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನಮಗೆ ತಿಳಿದಿದೆ" ಎಂದು ಹೇಳಿಕೆ ನೀಡುವುದರ ಮೂಲಕ ಅಗಲಿದ ಶೇನ್ ವಾರ್ನ್ ಅವರನ್ನು ಜೋಸ್ ಬಟ್ಲರ್ ಸ್ಮರಿಸಿದರು.

ಫೈನಲ್ ಆಡಲು ಉತ್ಸುಕನಾದ ಬಟ್ಲರ್
"ನಾನು ಇಂದು ತುಂಬಾ ಉತ್ಸುಕತೆಯಿಂದ ಕಣಕ್ಕಿಳಿದಿದ್ದೆ ಮತ್ತು ಲಕ್ಷ ಜನರ ಮುಂದೆ ಆಡುವ ಅವಕಾಶ, ದೊಡ್ಡ ಬೆಂಬಲ, ಅದ್ಭುತ ಕ್ರೀಡಾಂಗಣ ಮತ್ತು ಅದ್ಭುತ ಆಟವನ್ನು ನಾನು ಇಂದು ತುಂಬಾ ಆನಂದಿಸಿದೆ. ವಿಶ್ವದ ಅತಿದೊಡ್ಡ ಟಿ20 ಪಂದ್ಯಾವಳಿಯ ಫೈನಲ್ ಆಡುವ ಅವಕಾಶವನ್ನು ಪಡೆದದ್ದು ರೋಮಾಂಚನಕಾರಿಯಾಗಿದೆ" ಎಂದು ಹೇಳಿಕೆ ನೀಡುವುದರ ಮೂಲಕ ಐಪಿಎಲ್ ಫೈನಲ್ ಆಡುವುದರ ಕುರಿತು ಜೋಸ್ ಬಟ್ಲರ್ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟನ್ಸ್ ಫೈನಲ್ ಪಂದ್ಯ ಯಾವಾಗ?
ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯ ನಾಳೆ ( ಮೇ 29ರ ಭಾನುವಾರ ) ಅಹ್ಮದಾಬಾದ್ ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಶುರುವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications