ಅವರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ: ಕೊಹ್ಲಿ, ರೋಹಿತ್ ಐಪಿಎಲ್ ಫ್ಲಾಪ್ ಶೋ ಬಗ್ಗೆ ಗಂಗೂಲಿ ಹೇಳಿದ್ದಿಷ್ಟು!

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಕಣಕ್ಕಿಳಿದಿದ್ದರೆ, ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿ ಕೇವಲ ಓರ್ವ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ವಿಶ್ವ ಕ್ರಿಕೆಟ್‌ನ ಪ್ರಮುಖ ಆಟಗಾರರಾದ ಈ ಇಬ್ಬರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಕೇವಲ 128 ರನ್ ಗಳಿಸಿದ್ದು, ಎರಡು ಬಾರಿ ಗೋಲ್ಡನ್ ಡಕ್ ಔಟ್ ಆಗಿ ನೆಲ ಕಚ್ಚಿದ್ದರೆ, ರೋಹಿತ್ ಶರ್ಮಾ 8 ಪಂದ್ಯಗಳನ್ನಾಡಿ 153 ರನ್ ಕಲೆಹಾಕಿದ್ದಾರೆ. ಹೀಗೆ ತಮ್ಮ ಕ್ರಿಕೆಟ್ ಅನುಭವಕ್ಕೆ ತಕ್ಕಂತ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಒಂದೇ ಒಂದು ಅರ್ಧಶತಕ ಬಾರಿಸುವಲ್ಲಿಯೂ ಯಶಸ್ವಿಯಾಗಿಲ್ಲ. ಹೀಗಾಗಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಈ ಇಬ್ಬರ ಕುರಿತು ಹೆಚ್ಚಿನ ಚರ್ಚೆಗಳಲ್ಲಿ ತೊಡಗಿದ್ದು, ಇಬ್ಬರೂ ಇದೇ ರೀತಿಯ ಕಳಪೆ ಫಾರ್ಮ್ ಮುಂದುವರೆಸಿದರೆ, ಟೀಮ್ ಇಂಡಿಯಾದ ಗತಿಯೇನು ಎಂಬ ಆತಂಕ ಶುರುವಾಗಿದೆ.
ಹೌದು, ಟೀಮ್ ಇಂಡಿಯಾದ ರನ್ ಮೆಷಿನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ವಿಫಲರಾಗಿದ್ದು, ಇದೇ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇರುವ ಕಾರಣ ಟೀಮ್ ಇಂಡಿಯಾ ಅಭಿಮಾನಿಗಳು ಹಾಗೂ ಆಯ್ಕೆಗಾರರು ಈ ಕುರಿತು ತಲೆಕೆಡಿಸಿಕೊಂಡಿರುವುದಂತೂ ಖಚಿತ. ಇನ್ನು ಈಗಾಗಲೇ ಹಲವು ಹಿರಿಯ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪರಿಣಿತರು ಈ ಕುರಿತಾಗಿ ಮಾತನಾಡಿದ್ದು, ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳಪೆ ಪ್ರದರ್ಶನದ ಬಗ್ಗೆ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಅವರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ
ನ್ಯೂಸ್ 18 ಜೊತೆ ಮಾತನಾಡಿದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳಪೆ ಪ್ರದರ್ಶನದ ಕುರಿತು ಪ್ರಶ್ನೆ ಎದುರಾದಾಗ "ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಸಹ ಶ್ರೇಷ್ಠ ಆಟಗಾರರು. ಆದಷ್ಟು ಬೇಗ ಈ ಇಬ್ಬರೂ ಫಾರ್ಮ್‌ಗೆ ಮರಳಿದ್ದಾರೆ ಎಂಬ ನಂಬಿಕೆ ನನಗಿದೆ. ಮುಂದಿನ ಪಂದ್ಯಗಳಲ್ಲಿ ಈ ಇಬ್ಬರೂ ರನ್ ಗಳಿಸಲಿದ್ದಾರೆ. ವಿರಾಟ್ ಕೊಹ್ಲಿ ತಲೆಯಲ್ಲಿ ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಆದರೆ, ಅವರು ಆದಷ್ಟು ಬೇಗ ಲಯ ಕಂಡುಕೊಂಡು ರನ್ ಗಳಿಸಲಿದ್ದಾರೆ" ಎಂದು ಉತ್ತರಿಸಿದ್ದಾರೆ.

ಈ ಆಟಗಾರರನ್ನು ಹೊಗಳಿದ ಗಂಗೂಲಿ
ಇನ್ನೂ ಮುಂದುವರೆದು ಮಾತನಾಡಿದ ಸೌರವ್ ಗಂಗೂಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಮತ್ತು ತಂಡಗಳ ಕುರಿತು ಹೊಗಳಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿರುವ ನೂತನ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ಉತ್ತಮ ಪ್ರದರ್ಶನ ನೀಡುತ್ತಿವೆ ಎಂದಿರುವ ಗಂಗೂಲಿ ಉಮ್ರಾನ್ ಮಲಿಕ್ ಮೇಲೆ ಎಲ್ಲರ ಕಣ್ಣಿದೆ ಎಂದಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಂಡು ಹೊರಗುಳಿದಿರುವ ಆಟಗಾರ ಉಮೇಶ್ ಯಾದವ್ ಪ್ರದರ್ಶನದ ಬಗ್ಗೆ ಕೂಡ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಖಲೀಲ್ ಅಹ್ಮದ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಗಂಗೂಲಿ ಹೇಳಿದರು.

ಮುಂಬೈ ಔಟ್, ಆರ್‌ಸಿಬಿ ಪ್ಲೇಆಫ್ ಕತೆ?
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಈಗಾಗಲೇ ಕಳೆದುಕೊಂಡು ಹೊರಬಿದ್ದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು, ಉಳಿದ 4 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಬೇಕೆಂದರೆ ಉಳಿದ 5 ಪಂದ್ಯಗಳ ಪೈಕಿ ಉಳಿದ 3 ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications