ಚೆನ್ನೈ ಆಟಗಾರರನ್ನು ಕಾಡಿದ ಮುಂಬೈನ ಸ್ಪಿನ್ ಸೆನ್ಸೇಷನ್ ಹೃತಿಕ್ ಶೋಕೀನ್ ಯಾರು?

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತನ್ನ ಸೋಲಿನ ಸರಪಳಿಯನ್ನು ಮುಂದುವರೆಸಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಒಟ್ಟು 7 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಸೋತಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆಯಲಾಗದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಟೂರ್ನಿಯಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ನಂತರದ ಎಲ್ಲಾ ಪಂದ್ಯಗಳಲ್ಲೂ ಸೋತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ತನ್ನ ಏಳನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು.
ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಾ ಡಿ ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್‌ಗಳ ರೋಚಕ ಜಯವನ್ನು ದಾಖಲಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿನ ಸತತ ಏಳನೇ ಸೋಲನ್ನು ಕಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 156 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಅಂತಿಮ ಎಸೆತದವರೆಗೂ ಹೋರಾಡಿ ಜಯ ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಒತ್ತಡಕ್ಕೆ ಸಿಲುಕಿ ಅಂತಿಮ ಎಸೆತದವರೆಗೂ ಗೆಲುವಿಗಾಗಿ ಸೆಣಸಾಡುವಂಗತಾಯಿತು. ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ ಸ್ಪಿನ್ ಬೌಲರ್ ಹೃತಿಕ್ ಶೋಕೀನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದರು. ಅದರಲ್ಲಿಯೂ ಮುರುಗನ್ ಅಶ್ವಿನ್ ಬದಲಾಗಿ ಕಣಕ್ಕಿಳಿದ ಶೋಕೀನ್ ತಂಡಕ್ಕೆ ಅಗತ್ಯವಿದ್ದ ಸ್ಥಾನ ತುಂಬುವಲ್ಲಿ ಯಶಸ್ವಿಯಾದರು ಎಂದೇ ಹೇಳಬಹುದು. ಹೀಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಅಬ್ಬರಿಸಿದ ಈ ಹೃತಿಕ್ ಶೋಕೀನ್ ಯಾರು ಎಂಬುದರ ಕುರಿತಾದ ಕಿರು ವಿವರ ಈ ಕೆಳಕಂಡಂತಿದೆ ಓದಿ..

ಹೃತಿಕ್ ಶೋಕೀನ್ ಕ್ರಿಕೆಟ್ ಅಂಕಿಅಂಶ
ಆಗಸ್ಟ್ 14 2000ರಲ್ಲಿ ಜನಿಸಿದ ಹೃತಿಕ್ ಶೋಕೀನ್ ದೆಹಲಿ ತಂಡವನ್ನು ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. 8 ಲಿಸ್ಟ್ ಎ ಪಂದ್ಯಗಳನ್ನಾಡಿರುವ ಹೃತಿಕ್ ಶೋಕೀನ್ ಹಲವು ವಿಕೆಟ್‌ಗಳನ್ನು ಪಡೆದಿದ್ದಾರೆ. 4.92 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಶೋಕೀನ್ 21 ರನ್‌ಗಳಿಗೆ 2 ವಿಕೆಟ್ ಪಡೆದಿರುವುದು ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರ ಮೊದಲ ಪಟ್ಟಿಯಲ್ಲಿದ್ದ ಶೋಕೀನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆತನ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿತು.

ಚೆನ್ನೈ ವಿರುದ್ಧದ ಪಂದ್ಯದಲ್ಲೂ ಉತ್ತಮ ಬೌಲಿಂಗ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 23 ರನ್ ನೀಡಿದ ಹೃತಿಕ್ ಶೋಕೀನ್ ಆಡಿದ ಮೊದಲ ಪಂದ್ಯದಲ್ಲಿಯೇ ಹೆಚ್ಚು ರನ್ ನೀಡಿ ದುಬಾರಿಯಾಗದೇ ಉತ್ತಮ ಪ್ರದರ್ಶನ ನೀಡಿದರು. ಒತ್ತಡದ ಸಂದರ್ಭದಲ್ಲಿ ಬೌಲಿಂಗ್ ಮಾಡಿದ ಹೃತಿಕ್ ಶೋಕೀನ್‌ಗೆ ರಾಬಿನ್ ಉತ್ತಪ್ಪ ಅವರ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ, ಅಂಪೈರ್ ವಿವಾದಾತ್ಮಕ ತೀರ್ಪಿಗೆ ಇದನ್ನು ನಾಟ್ಔಟ್ ಎಂದು ಘೋಷಿಸಲಾಯಿತು. ಹೀಗಾಗಿ ಹೃತಿಕ್ ಶೋಕೀನ್ ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾದ ಶೋಕೀನ್
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಳೆ ಸೂರ್ಯಕುಮಾರ್ ಯಾದವ್ ಔಟ್ ಆದ ಬಳಿದ ಆರನೇ ಕ್ರಮಾಂಕದಲ್ಲಿ ಕೀರನ್ ಪೊಲಾರ್ಡ್‌ಗೂ ಮುನ್ನವೇ ಕಣಕ್ಕಿಳಿದ ಹೃತಿಕ್ ಶೋಕೀನ್ ಒತ್ತಡದ ನಡುವೆಯೇ 25 ಎಸೆತಗಳಲ್ಲಿ 25 ರನ್ ಕಲೆಹಾಕಿ ಸಹ ಆಟಗಾರ ತಿಲಕ್ ವರ್ಮಾಗೆ ಸಾಥ್ ನೀಡಿದರು. ಹೀಗೆ ಮೊದಲ ಪಂದ್ಯದಲ್ಲಿಯೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಎಡವದೇ ಜವಾಬ್ದಾರಿಯುತ ಪ್ರದರ್ಶನ ನೀಡಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದು, ಮತ್ತಷ್ಟು ಅವಕಾಶ ದೊರೆತರೆ ಉತ್ತಮ ಪ್ರದರ್ಶನ ನೀಡಿ ಮಿಂಚಬಲ್ಲೆ ಎಂಬ ಭರವಸೆ ಮೂಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications