
5. ಕ್ವಿಂಟನ್ ಡಿ ಕಾಕ್
2019ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪದಾರ್ಪಣೆ ಮಾಡಿದ ಕ್ವಿಂಟನ್ ಡಿ ಕಾಕ್ ಆ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 529 ರನ್ ಬಾರಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದರು ಹಾಗೂ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ನಡೆದ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 503 ರನ್ ಬಾರಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರಲ್ಲಿ ಆರನೆಯವರಾಗಿ ನಿಂತು ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವಲ್ಲಿ ಪಾತ್ರ ನಿರ್ವಹಿಸಿದರು. ಹೀಗೆ ಮೊದಲೆರಡು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಿದ್ದ ಕ್ವಿಂಟನ್ ಡಿ ಕಾಕ್ 2021ರ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 297 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದರು. ಹೀಗೆ ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಕ್ವಿಂಟನ್ ಡಿ ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ಮೆಗಾ ಹರಾಜಿನಲ್ಲಿ ಕೈಬಿಟ್ಟು ಇದೀಗ ಕೈ ಸುಟ್ಟುಕೊಂಡಿದೆ. ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿರುವ ಕ್ವಿಂಟನ್ ಡಿ ಕಾಕ್ 5 ಪಂದ್ಯಗಳಲ್ಲಿ 188 ರನ್ ಬಾರಿಸಿ ಉತ್ತಮ ಆರಂಭ ಪಡೆದುಕೊಂಡಿದ್ದಾರೆ.

4. ರಾಹುಲ್ ಚಹರ್
2018ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ರಾಹುಲ್ ಚಹರ್ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಪಡೆದುಕೊಂಡರು. ಮೊದಲನೇ ಆವೃತ್ತಿಯಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗದ ಚಹರ್ 2019ರ ಟೂರ್ನಿಯಲ್ಲಿ 13 ವಿಕೆಟ್, 2020ರ ಐಪಿಎಲ್ ಟೂರ್ನಿಯಲ್ಲಿ 15 ವಿಕೆಟ್ ಮತ್ತು 2021ರ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 13 ವಿಕೆಟ್ ಪಡೆದರು. ಹೀಗೆ ಕಳೆದ 3 ಆವೃತ್ತಿಗಳಲ್ಲಿ ತಂಡದ ಬೌಲಿಂಗ್ ವಿಭಾಗದ ಒಂದು ಅಸ್ತ್ರವಾಗಿದ್ದ ರಾಹುಲ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ವಾಪಸ್ ಕರೆತರುವಲ್ಲಿ ವಿಫಲವಾಗಿ ಕೈ ಸುಟ್ಟುಕೊಂಡಿದೆ. ಇನ್ನು ಈ ಬಾರಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿರುವ ರಾಹುಲ್ ಚಹರ್ 4 ಪಂದ್ಯಗಳ ಪೈಕಿ 7 ವಿಕೆಟ್ ಪಡೆದಿದ್ದು, ಇತ್ತ ಮುಂಬೈ ಇಂಡಿಯನ್ಸ್ ರಾಹುಲ್ ಚಾಹರ್ ಸ್ಥಾನಕ್ಕೆ ಕರೆತಂದಿರುವ ಮುರುಗನ್ ಅಶ್ವಿನ್ ಮತ್ತು ಮಯಾಂಕ್ ಮಾರ್ಕಂಡೆ ಹೆಚ್ಚು ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದಾರೆ.

3. ಟ್ರೆಂಟ್ ಬೌಲ್ಟ್
2020ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ಟ್ರೆಂಟ್ ಬೌಲ್ಟ್ ಆವೃತ್ತಿಯಲ್ಲಿ 15 ಪಂದ್ಯಗಳನ್ನಾಡಿ 25 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಹಾಗೂ ನಂತರ ನಡೆದ 2021ರ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 13 ವಿಕೆಟ್ ಪಡೆದ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ಇಂಡಿಯನ್ಸ್ ಮತ್ತೆ ತಂಡಕ್ಕೆ ಖರೀದಿಸುವಲ್ಲಿ ವಿಫಲವಾಯಿತು. ತಂಡದ ಮತ್ತೊಬ್ಬ ಬೌಲರ್ ಜಸ್ಪ್ರೀತ್ ಬುಮ್ರಾ ಜತೆ ಸೇರಿ ಪವರ್ ಪ್ಲೇನಲ್ಲಿ ಎದುರಾಳಿ ತಂಡಗಳ ವಿಕೆಟ್ ಉರುಳಿಸುತ್ತಿದ್ದ ಟ್ರೆಂಟ್ ಬೌಲ್ಟ್ ಅವರನ್ನು ಕೈಬಿಟ್ಟು ತಂಡ ಕೈ ಸುಟ್ಟುಕೊಂಡಿದೆ. ಹೀಗೆ ಮುಂಬೈ ತಂಡದಿಂದ ಹೊರಬಿದ್ದ ಟ್ರೆಂಟ್ ಬೌಲ್ಟ್ ಅವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿದ್ದು, ತಂಡದ ಪರ ಆಡಿರುವ ಮೊದಲ 4 ಪಂದ್ಯಗಳಲ್ಲಿ ಈಗಾಗಲೇ ಬೌಲ್ಟ್ 7 ವಿಕೆಟ್ ಪಡೆದು ಮಿಂಚಿದ್ದಾರೆ.

2. ಕೃನಾಲ್ ಪಾಂಡ್ಯ
2016ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಕ್ರುನಾಲ್ ಪಾಂಡ್ಯ ತಂಡಕ್ಕೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಸಹ ಉತ್ತಮ ಸೇವೆ ಒದಗಿಸಿದ್ದಾರೆ. 2016ರಲ್ಲಿ 237 ರನ್ ಕಲೆಹಾಕಿದ್ದ ಕೃನಾಲ್ ಪಾಂಡ್ಯ 2017ರಲ್ಲಿ 243 ರನ್ ಬಾರಿಸುವುದರ ಜತೆಗೆ 10 ವಿಕೆಟ್‍ಗಳನ್ನೂ ಸಹ ಪಡೆದುಕೊಂಡು ಉತ್ತಮ ಪ್ರದರ್ಶನವನ್ನು ನೀಡಿದ್ದರು ಹಾಗೂ ಅದೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 38 ಎಸೆತಗಳಲ್ಲಿ 47 ರನ್ ಬಾರಿಸಿ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಈ ಆವೃತ್ತಿಗಳಲ್ಲಿ ತಂಡದ ಪರ ಮಿಂಚಿದ ಕೃನಾಲ್ ಪಾಂಡ್ಯ ಕಳೆದ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗೆ ತಂಡದ ಪರ ಹಲವಾರು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೃನಾಲ್ ಪಾಂಡ್ಯ ಅವರನ್ನು ಈ ಬಾರಿ ಕೈಬಿಟ್ಟಿರುವ ಮುಂಬೈ ಇಂಡಿಯನ್ಸ್ ಕೈಸುಟ್ಟುಕೊಂಡಿರುವುದು ಸತ್ಯ.ಸದ್ಯ ಈ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿರುವ ಕ್ರುನಾಲ್ ಪಾಂಡ್ಯ 5 ಪಂದ್ಯಗಳನ್ನಾಡಿ 3 ವಿಕೆಟ್ ಕಬಳಿಸುವುದರ ಜತೆಗೆ 68 ರನ್‌ಗಳನ್ನೂ ಸಹ ಬಾರಿಸಿದ್ದಾರೆ.


Click it and Unblock the Notifications












