ಸಂಜು ಸ್ಯಾಮ್ಸನ್ ಸೇರಿದಂತೆ ಈ ಐವರು ಐಪಿಎಲ್ ಟ್ರೋಫಿ ಗೆದ್ದಿರುವ ವಿಷಯ ಹಲವರಿಗೆ ತಿಳಿದೇ ಇಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್, ವಿಶ್ವದ ಶ್ರೀಮಂತ ಹಾಗೂ ಅತಿಹೆಚ್ಚು ಕ್ರಿಕೆಟ್ ಪ್ರೇಕ್ಷಕರಿಂದ ವೀಕ್ಷಿಸಲ್ಪಡುವ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂಬ ಖ್ಯಾತಿಯನ್ನು ಪಡೆದಿದೆ. ಹೀಗೆ ವಿಶ್ವದ ದೊಡ್ಡ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂಬ ಹೆಸರನ್ನು ಹೊಂದಿರುವ ಈ ಐಪಿಎಲ್‌ನಲ್ಲಿ ಇದುವರೆಗೂ ಹದಿನಾಲ್ಕು ಆವೃತ್ತಿಗಳು ನಡೆದಿದ್ದು, ಈ ಆವೃತ್ತಿಗಳ ಪೈಕಿ ಮುಂಬೈ ಇಂಡಿಯನ್ಸ್ 5 ಬಾರಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಅತಿಹೆಚ್ಚು ಬಾರಿ ಐಪಿಎಲ್ ಗೆದ್ದಿರುವ ಯಶಸ್ವಿ ತಂಡ ಎನಿಸಿಕೊಂಡಿದ್ದರೆ, 4 ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಅತಿಹೆಚ್ಚು ಟ್ರೋಫಿ ಗೆದ್ದಿರುವ ಎರಡನೇ ತಂಡ ಎನಿಸಿಕೊಂಡಿದೆ.
ಇನ್ನುಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರೆ, ಡೆಕ್ಕನ್ ಚಾರ್ಜರ್ಸ್ ಒಮ್ಮೆ ಹಾಗೂ ಸನ್ ರೈಸರ್ಸ್ ಹೈದರಾಬಾದ ಒಮ್ಮೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿವೆ. ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ ಮೊದಲನೇ ಟೂರ್ನಿಯಲ್ಲಿ ಟ್ರೋಫಿ ಗೆದ್ದಿರುವ ಇತಿಹಾಸವನ್ನು ಹೊಂದಿದೆ.
ಇನ್ನು ಇಷ್ಟು ಬಾರಿ ನಡೆದಿರುವ ಐಪಿಎಲ್ ಟೂರ್ನಿಗಳ ಪೈಕಿ ಟ್ರೋಫಿ ಗೆದ್ದಿರುವ ಹಲವಾರು ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕಣಕ್ಕಿಳಿದಿದ್ದಾರೆ. ಹೀಗೆ ಈ ಬಾರಿಯ ಐಪಿಎಲ್ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ಆಟಗಾರರು ಐಪಿಎಲ್ ಟ್ರೋಫಿ ಗೆದ್ದಿರುವ ವಿಷಯ ಹಲವರಿಗೆ ತಿಳಿದೇ ಇಲ್ಲ ಅಥವಾ ಮರೆತುಹೋಗಿದೆ ಎಂದು ಹೇಳಬಹುದು. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ವಿಜೇತರೆನಿಸಿಕೊಂಡಿದ್ದರೂ ಹಲವರಿಗೆ ತಿಳಿಯದೇ ಇರುವ ಐವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

5. ಸಂಜು ಸ್ಯಾಮ್ಸನ್
ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕನಾಗಿ ಕಣಕ್ಕಿಳಿದಿರುವ ಸಂಜು ಸ್ಯಾಮ್ಸನ್ ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಗೆದ್ದಿರುವ ಅನುಭವವನ್ನು ಹೊಂದಿದ್ದಾರೆ. ಹೌದು, 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾಗ ಸಂಜು ಸ್ಯಾಮ್ಸನ್ ಕೂಡ ಕೆಕೆಆರ್ ತಂಡದ ಸದಸ್ಯನಾಗಿದ್ದರು. ಆದರೆ, ಆ ಸಮಯದಲ್ಲಿ ತಂಡದಲ್ಲಿ ಇತರೆ ಆಟಗಾರರಾದ ಯೂಸುಫ್ ಪಠಾಣ್, ಶಕಿಬ್ ಅಲ್ ಹಸನ್ ಮತ್ತು ಮನೋಜ್ ತಿವಾರಿಯ ಪೈಪೋಟಿ ಇದ್ದ ಕಾರಣ ಸಂಜು ಸ್ಯಾಮ್ಸನ್‌ಗೆ ಟೂರ್ನಿಯ ಯಾವುದೇ ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶ ಲಭಿಸಿರಲಿಲ್ಲ. ಆದರೆ, ಸಂಜು ಸ್ಯಾಮ್ಸನ್ ಐಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯ ಎನಿಸಿಕೊಂಡಿದ್ದಾರೆ.

4. ಅಕ್ಷರ್ ಪಟೇಲ್
2012ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ಅಕ್ಷರ್ ಪಟೇಲ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2013ರ ಹರಾಜಿನಲ್ಲಿ ಖರೀದಿಸಿತ್ತು. ಹಾಗೂ ಇದೇ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮುಂಬೈ ಇಂಡಿಯನ್ಸ್ ತನ್ನ ಚೊಚ್ಚಲ ಟ್ರೋಫಿಯನ್ನೂ ಸಹ ಮುಡಿಗೇರಿಸಿಕೊಂಡಿತ್ತು. ಹೀಗೆ ಅಂದು ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ಭಾಗವಾಗಿದ್ದ ಅಕ್ಷರ್ ಪಟೇಲ್ ಟೂರ್ನಿಯಲ್ಲಿ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯಲಿಲ್ಲ. ಇನ್ನು ವಿಶೇಷವೆಂದರೆ ಯುಜುವೇಂದ್ರ ಚಹಲ್ ಕೂಡ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು.

3. ದೀಪಕ್ ಹೂಡ
2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿ ಸುದ್ದಿಯಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದೀಪಕ್ ಹೂಡ ನಂತರದ ವರ್ಷದ ಐಪಿಎಲ್ ಹರಾಜಿನಲ್ಲಿ 4.20 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಪಾಲಾದರು. ಇನ್ನು ಈ ಆವೃತ್ತಿಯಲ್ಲಿ 17 ಪಂದ್ಯಗಳನ್ನಾಡಿದ್ದ ದೀಪಕ್ ಹೂಡಾ 144 ರನ್ ಗಳಿಸಿದ್ದರು ಹಾಗ ಫೈನಲ್ ಪಂದ್ಯದಲ್ಲಿಯೂ ಕಣಕ್ಕಿಳಿದಿದ್ದರು. ಹಾಗೂ ಈ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಟ್ರೋಫಿ ಗೆದ್ದು, ಚಾಂಪಿಯನ್ ಆಗಿ ಕೂಡ ಹೊರಹೊಮ್ಮಿತ್ತು.

2. ವೃದ್ಧಿಮಾನ್ ಸಹಾ
2008-2010ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ವೃದ್ಧಿಮಾನ್ ಸಹಾ 2011ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು. ಈ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಸಹಾ 68 ರನ್ ಗಳಿಸಿದ್ದರು. ಹಾಗೂ ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆದ್ದು ತನ್ನ ಎರಡನೇ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಮೂಲಕ ವೃದ್ಧಿಮಾನ್ ಸಹಾ ಕೂಡ ಐಪಿಎಲ್ ಟ್ರೋಫಿ ಗೆದ್ದಿರುವ ಅನುಭವವನ್ನು ಹೊಂದಿದ್ದಾರೆ.

1. ತಿಸಾರಾ ಪೆರೆರಾ
ಶ್ರೀಲಂಕಾ ಆಲ್‌ರೌಂಡರ್ ತಿಸಾರಾ ಪೆರೆರಾ 2010ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯನಾಗಿದ್ದರು. ಹಾಗೂ ಈ ಆವೃತ್ತಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡಿದ್ದ ಪೆರೆರಾ ಒಂದು ಓವರ್ ಬೌಲಿಂಗ್ ಮಾಡಿ 19 ರನ್ ನೀಡಿದ್ದರು. ಈ ಮೂಲಕ ತಿಸಾರಾ ಪೆರೆರಾ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ಅನುಭವವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications