IPL 2022: ನಿವೃತ್ತಿ ಯಾವಾಗ ಎಂಬ ಪ್ರಶ್ನೆ ಕುರಿತು ತುಟಿ ಬಿಚ್ಚಿದ ಎಂಎಸ್ ಧೋನಿ ಹೇಳಿದ್ದಿಷ್ಟು

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳೆದ ಬಾರಿಯ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಾಗದೇ ನೆಲಕಚ್ಚಿದೆ ಎಂದೇ ಹೇಳಬಹುದು.
ಹೌದು, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಸಾಲು ಸಾಲು ಪಂದ್ಯಗಳನ್ನು ಸೋಲುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿತು. ಇನ್ನು ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿ ಅಚ್ಚರಿ ಮೂಡಿಸಿದ್ದರು. ಹೀಗೆ ರವೀಂದ್ರ ಜಡೇಜಾ ನೂತನ ನಾಯಕನಾಗಿ ಆಯ್ಕೆಯಾದ ನಂತರ ಎಂಎಸ್ ಧೋನಿ ನಿವೃತ್ತಿ ಕುರಿತು ಇದ್ದ ಪ್ರಶ್ನೆಗಳು ಹೆಚ್ಚಾಗತೊಡಗಿದವು. ಕೆಲವರು ಇದೇ ಎಂಎಸ್ ಧೋನಿ ಅವರ ಅಂತಿಮ ಐಪಿಎಲ್ ಆವೃತ್ತಿ, ಹೀಗಾಗಿಯೇ ರವೀಂದ್ರ ಜಡೇಜಾ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿದೆ ಎಂದೆಲ್ಲಾ ಅಭಿಪ್ರಾಯಗಳನ್ನು ವ್ಯಕ್ತಪಡಿಸತೊಡಗಿದರು.
ಇನ್ನು ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಯಾವಾಗ ವಿದಾಯ ಹೇಳಲಿದ್ದಾರೆ ಎಂಬ ಪ್ರಶ್ನೆ ಈಗಾಗಲೇ ಸಾಕಷ್ಟು ಬಾರಿ ಎದುರಾಗಿದ್ದು, ಕಳೆದ ಆವೃತ್ತಿಯಲ್ಲಿಯೂ ಇದೇ ಪ್ರಶ್ನೆ ಎದುರಾದಾಗ ನಿವೃತ್ತಿಯ ಪ್ರಶ್ನೆ ಸದ್ಯಕ್ಕಿಲ್ಲ ಎಂದು ಎಂಎಸ್ ಧೋನಿ ಉತ್ತರಿಸಿದ್ದರು. ಇದೀಗ ಮತ್ತದೇ ಪ್ರಶ್ನೆ 40 ವರ್ಷದ ಕ್ಯಾಪ್ಟನ್ ಕೂಲ್‌ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದ ವೇಳೆ ಎದುರಾಗಿದೆ. ಹೌದು, ಪಂದ್ಯಕ್ಕೂ ಮುನ್ನ ಮಾತನಾಡಿದ ಎಂ ಎಸ್ ಧೋನಿ ನಿವೃತ್ತಿಯ ಕುರಿತಾಗಿ ಎದುರಾದ ಪ್ರಶ್ನೆಗೆ ಈ ಕೆಳಕಂಡಂತೆ ಉತ್ತರವನ್ನು ನೀಡಿದ್ದಾರೆ.

ನಿವೃತ್ತಿ ಯಾವಾಗ?
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಮರಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯವನ್ನು ವಹಿಸಿಕೊಂಡಿರುವ ಎಂಎಸ್ ಧೋನಿ ಪಂದ್ಯದ ಟಾಸ್ ವೇಳೆ ನಿವೃತ್ತಿಯ ಪ್ರಶ್ನೆ ಎದುರಾದಾಗ ಈ ವರ್ಷ ಎಲ್ಲೋ ಜೆರ್ಸಿಯಲ್ಲಿ ಆಡುತ್ತಿದ್ದೇನೆ, ಮುಂದಿನ ವರ್ಷವೂ ಎಲ್ಲೋ ಜೆರ್ಸಿಯಲ್ಲಿಯೇ ಆಡಲಿದ್ದೇನೆ, ಆದರೆ ಆ ಎಲ್ಲೋ ಜೆರ್ಸಿ ಯಾವುದು ಎಂದು ತಿಳಿಯಲು ಮುಂದಿನ ವರ್ಷದವರೆಗೂ ಕಾಯಬೇಕು ಎಂದಿದ್ದಾರೆ. ಈ ಮೂಲಕ ಮುಂದಿನ ವರ್ಷ ಸಹ ಕಣಕ್ಕಿಳಿಯಲಿದ್ದೇನೆ ಎಂಬುದನ್ನು ಎಂ ಎಸ್ ಧೋನಿ ಪರೋಕ್ಷವಾಗಿ ತಿಳಿಸಿದ್ದಾರೆ.

ಧೋನಿ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್
ಇನ್ನು ಎಂಎಸ್ ಧೋನಿ ಆಡಿದ ಈ ಮಾತುಗಳನ್ನು ಕೇಳಿದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಮುಂದಿನ ವರ್ಷವೂ ಕಣಕ್ಕಿಳಿಯುವ ಸುಳಿವನ್ನು ನೀಡಿದ್ದಾರೆ, ನಾವು ಮತ್ತೊಂದು ವರ್ಷ ಧೋನಿ ಆಟವನ್ನು ಕಣ್ತುಂಬಿಕೊಳ್ಳಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಪಟ್ಟಿದ್ದಾರೆ.

ನಾಯಕತ್ವ ಮರಳಿ ಪಡೆದ ಬೆನ್ನಲ್ಲೇ ಗೆಲುವು, ಪ್ಲೇಆಫ್ ಕತೆ?
ಇನ್ನು ರವೀಂದ್ರ ಜಡೇಜಾರಿಂದ ನಾಯಕತ್ವವನ್ನು ಮರಳಿ ಪಡೆದಿರುವ ಎಂ ಎಸ್ ಧೋನಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತಂಡವನ್ನು ಗೆಲ್ಲಿಸುವುದರ ಮೂಲಕ ಶುಭಾರಂಭ ಮಾಡಿದ್ದಾರೆ. 9 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋತು, 6 ಅಂಕಗಳನ್ನು ಪಡೆದುಕೊಂಡು ಒಂಬತ್ತನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಬೇಕೆಂದರೆ ಇನ್ನುಳಿದಿರುವ ಎಲ್ಲಾ 5 ಪಂದ್ಯಗಳಲ್ಲಿಯೂ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳುವ ಮಟ್ಟಕ್ಕೆ ಗೆಲ್ಲಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications