ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅದರದ್ದೇ ತವರಿನಲ್ಲಿ ಸುದೀರ್ಘ ಕಾಲದ ಬಳಿಕ ಆರ್‌ಸಿಬಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ತಂಡದ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದ ಈ ಪಂದ್ಯದಲ್ಲಿ ಫಾಫ್ ಪಡೆ ಸಂಪೂರ್ಣ ಮೇಲುಗೈ ಸಾಧಿಸಿ ಭರ್ಜರಿ ಗೆಲುವು ಪಡೆದುಕೊಂಡಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಒಂದು ಹೆಜ್ಜೆ ಮೇಲುಗೈ ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಉತ್ತಮ ಪ್ರದರ್ಶನ ನೀಡಿದೆ. ಎಸ್‌ಆರ್‌ಹೆಚ್ ಪರವಾಗಿ ಕ್ಲಾಸೆನ್ ಏಕಾಂಗಿ ಹೋರಾಟ ನಡೆಸಿದರು. ಆದರೆ ಬೌಲಿಂಗ್‌ನಲ್ಲಿ ಎಸ್‌ಆರ್‌ಹೆಚ್ ಸಂಪೂರ್ಣ ವಿಫಲವಾಗಿತ್ತು. ಆರ್‌ಸಿಬಿ ದಿಗ್ಗಜ ಆಟಗಾರರ ಮುಂದೆ ಎಸ್‌ಆರ್‌ಹೆಚ್ ಬೌಲಿಂಗ್ ವಿಭಾಗ ಮಂಕಾಯಿತು.

ಇನ್ನು ಈ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅನೇಕ ಕ್ಷಣಗಳು ಇದ್ದವು. ಎರಡು ತಂಡಗಳ ಕ್ರಿಕೆಟ್ ಅಭಿಮಾನಿಗಳು ಕೂಡ ಆನಂದಿಸಿದ ವಿಶೇಷ ಕ್ಷಣಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..
ಹೆನ್ರಿಕ್ ಕ್ಲಾಸಿಕ್ ಕ್ಲಾಸ್ ಆಟ
ಈ ಬಾರಿಯ ಐಪಿಎಲ್‌ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ವಿಕೆಟ್ ಕೀಪರ್ ಬ್ರಯಾಟರ್ ಹೆನ್ರಿಕ್ ಕ್ಲಾಸೆನ್ ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ಆಪತ್ಬಾಂಧವನಾಗಿ ಮಿಂಚಿದ್ದಾರೆ. ಅನೇಕ ಪಂದ್ಯದಲ್ಲಿ ಕ್ಲಾಸೆನ್ ಆಟ ತಂಡಕ್ಕೆ ಆಧಾರವಾಗಿತ್ತು. ಆದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕ್ಲಾಸೆನ್ ಬ್ಯಾಟಿಂಗ್ ಮತ್ತೊಂದು ಮಟ್ಟದಲ್ಲಿತ್ತು ಎಂದರೆ ತಪ್ಪಿಲ್ಲ. ಯಾವ ಹಂತದಲ್ಲಿಯೂ ಆರ್‌ಸಿಬಿ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೆ ಸುಂದರವಾಗಿ ಬ್ಯಾಟಿಂಗ್ ನಡೆಸಿದರು ಕ್ಲಾಸೆನ್ ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸಿದರು.
ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿ
ಇನ್ನು ಈ ಪಂದ್ಯ ಬ್ಯಾಟರ್‌ಗಳ ಅಬ್ಬರವೇ ಜೋರಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಕ್ಲಾಸೆನ್ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರೆ ಆರ್‌ಸಿಬಿ ಪರ ಕೊಹ್ಲಿ ಫಾಫ್ ಅಬ್ಬರಿಸಿದ್ದರು. ಆದರೆ ಈದರ ಮಧ್ಯೆಯೂ ಆರ್‌ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನ ಅತ್ಯಂತ ನಿರ್ಣಾಯಕವಾಗಿತ್ತು ಎಂಬುದು ಗಮನಾರ್ಹ. ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಸಿರಾಜ್ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ನೀಡಿದ್ದ ಕೇವಲ 4 ರನ್ ಮಾತ್ರ. ಒಟ್ಟು ನಾಲ್ಕು ಓವರ್‌ಗಳ ತಮ್ಮ ಬೌಲಿಂಗ್ ದಾಳಿಯಲ್ಲಿ ಕೇವಲ 17 ರನ್ ನೀಡಿ ಸಿರಾಜ್ 1 ವಿಕೆಟ್ ಪಡೆದುಕೊಂಡರು. ಈ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ತಲೆದೂಗಿದ್ದಾರೆ.
ಫಾಫ್-ಕೊಹ್ಲಿ 172 ರನ್‌ಗಳ ಜೊತೆಯಾಟ
ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನೀಡಿದ 187 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ ಅಮೋಘ ಜೊತೆಯಾಟ ಪ್ರದರ್ಶಿಸಿದರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಈ ಆಟಗಾರರ ಮತ್ತೊಂದು ಶತಕದ ಜೊತೆಯಾಟ ನೀಡುವ ಮೂಲಕ ಅಬ್ಬರಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಹಾಗೂ ಫಾಫ್ ಜೋಡಿ ಬರೊಬ್ಬರಿ 172 ರನ್‌ಗಳ ಜೊತೆಯಾಟ ನೀಡಿದರು.
ಕೊಹ್ಲಿ 6ನೇ ಐಪಿಎಲ್ ಶತಕ
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ 6ನೇ ಶತಕ ಸಿಡಿಸಿ ಅಬ್ಬರಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಅವರು ತಂಡಕ್ಕೆ ಎಲ್ಲೂ ಹಿನ್ನಡೆಯಾಗದಂತೆ ನೋಡಿಕೊಂಡರು. ಒಟ್ಟು 63 ಎಸೆತ ಎದುರಿಸಿದ ವಿರಾಟ್ ಕೊಹ್ಲಿ ಭರ್ತಿ 100 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಒಳಗೊಂಡಿತ್ತು.