
2023ರ ಐಪಿಎಲ್ ಆವೃತ್ತಿಗಾಗಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆಯವರನ್ನು ತೆಗೆದುಹಾಕಿದ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟೀಕಿಸಿದ್ದಾರೆ.
ಅನಿಲ್ ಕುಂಬ್ಳೆಯವರನ್ನು ತಂಡದ ಕೋಚ್ ಹುದ್ದೆಯಿಂದ ತೆಗೆದುಹಾಕಿದ ಕ್ರಮವನ್ನು ಪ್ರಶ್ನಿಸಿರುವ ಅವರು, ಕುಂಬ್ಳೆ ಉತ್ತಮ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದ್ದಾರೆ.
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ ಸ್ಯಾಮ್ ಕರನ್‌ರನ್ನು ಬರೊಬ್ಬರಿ 18.5 ಕೋಟಿ ರುಪಾಯಿ ನೀಡಿ ಖರೀದಿಸಿತು. ನಂತರ ಅವರು ಮಿನಿ ಹರಾಜಿನಲ್ಲಿ ಸಿಕಂದರ್ ರಾಜಾ (50 ಲಕ್ಷ ರು.), ಹರ್‌ಪ್ರೀತ್ ಭಾಟಿಯಾ (40 ಲಕ್ಷ ರು.), ವಿದ್ವತ್ ಕಾವೇರಪ್ಪ (20 ಲಕ್ಷ ರು.), ಮೋಹಿತ್ ರಥೀ (20 ಲಕ್ಷ ರು) ಮತ್ತು ಶಿವಂ ಸಿಂಗ್ (20 ಲಕ್ಷ ರು.) ತಂಡಕ್ಕೆ ಸೇರ್ಪಡೆ ಮಾಡಿಕೊಂಡರು.
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದು, ಪಂಜಾಬ್ ತಂಡವನ್ನು ಪ್ರಶ್ನಿಸಿದ್ದಾರೆ. "ನೀವು ತಂಡದಲ್ಲಿ ಬದಲಾವಣೆ ಮಾಡದಿದ್ದರೆ, ಅನಿಲ್ ಕುಂಬ್ಳೆ ಸರಿಯಾದ ತಂಡವನ್ನು ಕಟ್ಟಿದ್ದಾರೆ ಎಂದು ಅರ್ಥ. ನೀವು ಉತ್ತಮ ತಂಡದ ಆಯ್ಕೆಯನ್ನು ಮಾಡಿದ್ದಿರಿ, ಹಾಗಾದರೆ ತಂಡದ ಹೊಸ ಕೋಚ್ ಟ್ರೆವರ್ ಬೇಲಿಸ್ ತಂಡಕ್ಕೆ ಏನು ಕೊಡುಗೆ ನೀಡಿದಂತಾಯಿತು. ಅನಿಲ್ ಕುಂಬ್ಳೆ ಅವರನ್ನು ಯಾಕೆ ತೆಗೆದುಹಾಕಬೇಕಿತ್ತು" ಎಂದು ಕೇಳಿದ್ದಾರೆ.
ಅನಿಲ್ ಕುಂಬ್ಳೆ ಜೊತೆಯಲ್ಲಿ ತಂಡದಿಂದ ಮಯಾಂಕ್ ಅಗರ್ವಾಲ್‌ರನ್ನು ಕೈಬಿಟ್ಟ ಕ್ರಮವನ್ನೂ ಅವರು ಪ್ರಶ್ನೆ ಮಾಡಿದ್ದಾರೆ. ಅಗರ್ವಾಲ್‌ರಂತಹ ಅನುಭವಿ ಆಟಗಾರನನ್ನು ಕೈಬಿಡುವುದು ಒಳ್ಳೆಯ ನಡೆ ಅಲ್ಲ, ಆತ ತಂಡದಲ್ಲಿ ಇರಬೇಕಿತ್ತು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಇಬ್ಬರು ಪ್ರಮುಖ ಆಟಗಾರರ ಖರೀದಿ
2023ರ ಹರಾಜಿಗಿಂತ ಮುನ್ನ ಪಂಜಾಬ್ ಕಿಂಗ್ಸ್ ತಂಡ, ಐವರು ವಿದೇಶಿ ಆಟಗಾರರನ್ನು ಉಳಿಸಿಕೊಂಡಿದೆ. ಜಾನಿ ಬೈರ್‌ಸ್ಟೋವ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್, ಭಾನುಕಾ ರಾಜಪಕ್ಸೆ ಮತ್ತು ನಾಥನ್ ಎಲ್ಲಿಸ್ ಅವರು ತಂಡದಲ್ಲಿ ಉಳಿದರು. ಸ್ಯಾಮ್ ಕರನ್ ಮತ್ತು ಸಿಕಂದರ್ ರಜಾ ತಂಡಕ್ಕೆ ಸೇರ್ಪಡೆಯಾದ ಹೊಸ ವಿದೇಶಿ ಆಟಗಾರರಾಗಿದ್ದಾರೆ. ಇನ್ನೂ ಒಬ್ಬ ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ ಇತ್ತು, ಪರ್ಸ್‌ನಲ್ಲಿ 12.95 ಕೋಟಿ ಹಣ ಉಳಿದಿದ್ದರೂ ಅವರು ವಿದೇಶಿ ಆಟಗಾರನ ಖರೀದಿಗೆ ಆಸಕ್ತಿ ತೋರಲಿಲ್ಲ.
ಇನ್ನೊಬ್ಬ ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳದ ಪಂಜಾಬ್ ಕಿಂಗ್ಸ್ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. "ತಂಡದಲ್ಲಿ 25 ಸದಸ್ಯರನ್ನು ಹೊಂದುವ ಅವಕಾಶ ಇದ್ದಾಗಲೂ 22 ಸದಸ್ಯರ ತಂಡವನ್ನು ಹೊಂದಿದ್ದಾರೆ. ಇನ್ನೊಬ್ಬ ವಿದೇಶಿ ಆಟಗಾರನನ್ನು ಖರೀದಿಸುವ ಅವಕಾಶ ಇದ್ದರೂ ಅದನ್ನು ಮಾಡಲಿಲ್ಲ. ಕೋವಿಡ್ ಬೆದರಿಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇನ್ನೊಬ್ಬ ವಿದೇಶಿ ಆಟಗಾರನನ್ನು ಸೇರಿಸಿಕೊಳ್ಳಬೇಕಿತ್ತು" ಎಂದು ಚೋಪ್ರಾ ಹೇಳಿದ್ದಾರೆ.