IPL 2023: ಬೆಂಗಳೂರಿಗೆ ಬಂದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್

ಭಾನುವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಆರ್‌ಸಿಬಿ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಬ್ಬರೂ ಬೆಂಗಳೂರಿಗೆ ಆಗಮಿಸಿರುವ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಅಪಾರ ಕೊಡುಗೆ ನೀಡಿರುವ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಗೌರವಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಿರ್ಧರಿಸಿದೆ. ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈಗಾಗಲೇ ಸಜ್ಜಾಗಿದೆ.
ಕಾರ್ಯಕ್ರಮದಲ್ಲಿ ತಂಡದ ಆರಂಭಿಕ ಅಭ್ಯಾಸದ ಅವಧಿಯಲ್ಲಿ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮುಂತಾದ ತಮ್ಮ ಪ್ರೀತಿಯ ಆಟಗಾರರನ್ನು ಅಭಿಮಾನಿಗಳು ನೋಡಬಹುದಾಗಿದೆ. 2023ರ ಐಪಿಎಲ್‌ಗಾಗಿ ಆರ್ ಸಿಬಿ ಜೆರ್ಸಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಗುವುದು.
ಆರ್‌ಸಿಬಿಯ ಮೂವರು ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಈ ಸಂದರ್ಭದಲ್ಲಿ ಒಂದಾಗಲಿದ್ದಾರೆ. ತಂಡವು ಡಿವಿಲಿಯರ್ಸ್ ಮತ್ತು ಗೇಲ್ ಅವರ ಜರ್ಸಿ ಸಂಖ್ಯೆಯನ್ನು ಶಾಶ್ವತವಾಗಿ ನಿವೃತ್ತಿಗೊಳಿಸುವ ಮೂಲಕ ಅವರನ್ನು ಗೌರವಿಸುತ್ತದೆ ಮತ್ತು ಅವರಿಗೆ ಆರ್ ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡುತ್ತದೆ.

ಇಬ್ಬರು ದಿಗ್ಗಜ ಆಟಗಾರರು
ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ 144 ಪಂದ್ಯಗಳಲ್ಲಿ 158.6 ಸ್ಟ್ರೈಕ್ ರೇಟ್‌ನೊಂದಿಗೆ ಐದು ಸಾವಿರ ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್ 84 ಪಂದ್ಯಗಳನ್ನಾಡಿದ್ದು, 152.7 ಸ್ಟ್ರೈಕ್‌ರೇಟ್‌ನಲ್ಲಿ 44 ಸರಾಸರಿಯಲ್ಲಿ 3,163 ರನ್ ಗಳಿಸಿದ್ದಾರೆ. ಗೇಲ್ ಆರ್ ಸಿಬಿ ಪರವಾಗಿ 239 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.
ಇಬ್ಬರೂ ಆಟಗಾರರು ಐಪಿಎಲ್‌ನಿಂದ ನಿವೃತ್ತಿ ಪಡೆದುಕೊಂಡಿದ್ದರೂ ಆರ್ ಸಿಬಿ ತಂಡದ ಜೊತೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಆರ್ ಸಿಬಿ ಅಭಿಮಾನಿಗಳು ಕೂಡ ಎಬಿಡಿ ಮತ್ತು ಕ್ರಿಸ್‌ಗೇಲ್ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ.

ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮುಖಾಮುಖಿ
ಆರ್‌ಸಿಬಿ ಐಪಿಎಲ್ 2023 ರ ತನ್ನ ಮೊದಲನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಆರ್ ಸಿಬಿಯ ಮೊದಲನೇ ಪಂದ್ಯವೇ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವುದು ಅಭಿಮಾನಗಳ ಸಂತಸವನ್ನು ಹೆಚ್ಚಿಸಿದೆ. ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು, ತುಂಬಿದ ಅಂಗಳದಲ್ಲಿ ಡುಪ್ಲೆಸಿಸ್ ಪಡೆ ಮೊದಲನೇ ಪಂದ್ಯವನ್ನು ಆಡಲಿದೆ.
ಕಳೆದ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ತಲುಪಿತ್ತು. ಆದರೆ, ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಬಾರಿ ಕೂಡ ಕಳೆದ ಬಾರಿಯ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.
ವನಿಂದು ಹಸರಂಗ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿರುವ ಕಾರಣ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ದಿನೇಶ್ ಕಾರ್ತಿಕ್ ಕಳೆದ ಬಾರಿಯಂತೆ ಬ್ಯಾಟಿಂಗ್ ಪ್ರದರ್ಶಿಸಿದರೆ, ಈ ಬಾರಿ ಆರ್ ಸಿಬಿ ಎಲ್ಲಾ ತಂಡಗಳಿಗೂ ಕಠಿಣ ಸವಾಲಾಕುವುದಂತು ನಿಶ್ಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications