
2023ರ ಐಪಿಎಲ್ ಆರಂಭಕ್ಕೆ ಮುನ್ನ ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿಗಳು ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ತೀವ್ರ ಅಸಮಾಧಾನಗೊಂಡಿವೆ. ಮುಂದಿನ ಬಾರಿ ಐಪಿಎಲ್ ಹರಾಜಿನಲ್ಲಿ ಈ ಎರಡೂ ದೇಶಗಳ ಆಟಗಾರರ ಮೇಲೆ ನಿಷೇಧ ಹೇರುವ ಭೀತಿ ಎದುರಾಗಿದೆ.
ಶ್ರೀಲಂಕಾ ತಂಡಕ್ಕಿಂತ ಬಾಂಗ್ಲಾದೇಶದ ಆಟಗಾರರ ಮೇಲೆ ಬಿಸಿಸಿಐ ಮತ್ತು ಫ್ರಾಂಚೈಸಿಗಳು ಹೆಚ್ಚಾಗಿ ಅಸಮಾಧಾನಗೊಂಡಿವೆ. ಎರಡೂ ತಂಡಗಳು ಐಪಿಎಲ್ ಹತ್ತಿರವಾದ ಸಮಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಚೇಷ್ಟೆ ಆರಂಭಿಸಿವೆ.
ಐಪಿಎಲ್ ನಡೆಯುವ ಸಮಯದಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದ್ವಿಪಕ್ಷೀಯ ಸರಣಿಯನ್ನು ಆಡಲು ನಿರ್ಧರಿಸಿದೆ. ಇದರಿಂದಾಗಿ ಐಪಿಎಲ್‌ನಲ್ಲಿ ಆಡಬೇಕಾದ ಆಟಗಾರರಿಗೆ ಎನ್ಒಸಿ ಕೊಡಲು ನಿರಾಕರಿಸಿದೆ. ಇದೇ ಈಗ ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಗಳ ಕೋಪಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಮೂವರು ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ಆಡಲಿದ್ದಾರೆ. ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್ ಮತ್ತು ಮುಸ್ತಾಫಿಜುರ್ ರೆಹಮಾನ್ ಏಪ್ರಿಲ್ 9ರವರೆಗೆ ಐಪಿಎಲ್‌ನಲ್ಲಿ ಆಡಲು ಲಭ್ಯವಿಲ್ಲ. ಏಪ್ರಿಲ್ 9ರಿಂದ ಮೇ 5ರವರೆಗೆ ಐಪಿಎಲ್‌ನಲ್ಲಿ ಆಡಲು ಲಭ್ಯವಿದ್ದು ಮೇ 6ರಿಂದ ಮೇ 15ರವರೆಗೆ ಮತ್ತೆ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ.

ಏಕದಿನ ವಿಶ್ವಕಪ್‌ನತ್ತ ಎರಡೂ ತಂಡಗಳ ಚಿತ್ತ
2023ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಉದ್ದೇಶದಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಪ್ರಮುಖ ಆಟಗಾರರಿಗೆ ಐಪಿಎಲ್‌ಗಿಂತ ಮೊದಲು ರಾಷ್ಟ್ರಕ್ಕಾಗಿ ಆಡುವಂತೆ ಸೂಚಿಸಲಾಗಿದೆ. ನಾಲ್ವರು ಶ್ರೀಲಂಕಾ ಆಟಗಾರರು ಕೂಡ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು ಏಪ್ರಿಲ್ 8ರ ನಂತರವಷ್ಟೇ ಐಪಿಎಲ್‌ಗೆ ಲಭ್ಯವಿರಲಿದ್ದಾರೆ.
"ಇತರೆ ದೇಶಗಳ ಕ್ರಿಕೆಟ್ ಮಂಡಳಿಗಳ ಜೊತೆ ಮಾತುಕತೆ ನಡೆಸುವುದು ಬಿಸಿಸಿಐ ಆಗಿರುವುದರಿಂದ ಫ್ರಾಂಚೈಸಿಗಳು ದೂರು ನೀಡಲಾಗದು. ಆದರೆ ಮುಂದಿನ ದಿನಗಳಲ್ಲಿ ಕೆಲವು ದೇಶಗಳ ಆಟಗಾರರನ್ನು ಆಯ್ಕೆ ಮಾಡುವಾಗ ಫ್ರಾಂಚೈಸಿಗಳು ಯೋಚಿಸಬೇಕಾಗುತ್ತದೆ. ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಆಡುವವರು ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಬಾರದು" ಎಂದು ಪ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವೇಳಾಪಟ್ಟಿ ನೀಡಿದ್ದೇವೆ ಎಂದ ಬಾಂಗ್ಲಾದೇಶ
ಬಾಂಗ್ಲಾದೇಶದ ಪಂದ್ಯಗಳಲ್ಲಿ ಶಕೀಬ್, ಲಿಟ್ಟನ್ ಮತ್ತು ಮುಸ್ತಾಫಿಜುರ್ ಐಪಿಎಲ್‌ಗೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಖಚಿತಪಡಿಸಿದ್ದಾರೆ. ಒಟ್ಟಾರೆಯಾಗಿ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ 7 ಆಟಗಾರರು ಇರುತ್ತಾರೆ. ಇಡೀ ಪಂದ್ಯಾವಳಿಗೆ ಭಾನುಕಾ ರಾಜಪಕ್ಸೆ ಲಭ್ಯವಿದ್ದರೆ, ಇತರ ಮೂವರು ಶ್ರೀಲಂಕಾ ತಾರೆಗಳು - ಸಿಎಸ್‌ಕೆಯಿಂದ ಇಬ್ಬರು - ಎರಡನೇ ವಾರದಿಂದ ಲಭ್ಯವಿರುತ್ತಾರೆ.
"ಸಮಸ್ಯೆಯ ಬಗ್ಗೆ ನನ್ನನ್ನು ಪ್ರಶ್ನೆ ಮಾಡಲಾಗುತ್ತಿದೆ. ಆದರೆ ಐಪಿಎಲ್ ಅಧಿಕಾರಿಗಳು ಆಟಗಾರರ ಲಭ್ಯತೆಯ ಬಗ್ಗೆ ನಮ್ಮನ್ನು ಕೇಳಿದಾಗ ಅವರಿಗೆ ನಮ್ಮ ವೇಳಾಪಟ್ಟಿಯನ್ನು ನೀಡಿದ್ದವೇ. ಎಲ್ಲವನ್ನೂ ತಿಳಿದಿದ್ದರೂ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಲಾಗಿದೆ. ಈ ಪಂದ್ಯಗಳು ನಮಗೆ ಸಾಕಷ್ಟು ಮುಖ್ಯವಾಗಿರುವ ಕಾರಣ, ನಮ್ಮ ಮುಂದೆ ಬೇರೆ ಯಾವುದೇ ಆಯ್ಕೆಯಿಲ್ಲ" ಎಂದು ನಜ್ಮುಲ್ ಹಸನ್ ಹೇಳಿದ್ದಾರೆ.
ಬಿಸಿಬಿಯ ನಿರ್ಧಾರದಿಂದ ಬಿಸಿಸಿಐ ಕೋಪಗೊಂಡಿದ್ದರೂ, ಭಾರತೀಯ ಮಂಡಳಿಯು ಕಾದು ನೋಡುವ ವಿಧಾನವನ್ನು ತೆಗೆದುಕೊಳ್ಳುತ್ತಿದೆ. ಐಪಿಎಲ್ 2024 ಹರಾಜಿನ ಮೊದಲು ಫ್ರಾಂಚೈಸಿಗಳು ಬಿಸಿಬಿಯ ನಿಲುವಿನ ಬಗ್ಗೆ ಸ್ಪಷ್ಟತೆ ಪಡೆಯುವ ಸಾಧ್ಯತೆಯಿದೆ. ಮುಂದಿನ ಋತುವಿನ ಮೊದಲು ಎಲ್ಲಾ ಬಾಂಗ್ಲಾದೇಶದ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಶ್ರೀಲಂಕಾದ ಆಟಗಾರರಾದ ವನಿಂದು ಹಸರಂಗ, ಮಥೀಶ ಪತಿರಣ, ಮಹೇಶ್ ತೀಕ್ಷಣ ಏಪ್ರಿಲ್ 8ರ ನಂತರ ತಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾನುಕಾ ರಾಜಪಕ್ಸೆ ಮಾತ್ರ ಮೊದಲ ಪಂದ್ಯದಿಂದಲೇ ಆಯ್ಕೆಗೆ ಲಭ್ಯವಿದ್ದಾರೆ.