
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಹೊತ್ತಲ್ಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಭಾರತ ತಂಡದ ಆಟಗಾರರು ವಿಶೇಷವಾಗಿ ಬೌಲರ್ ಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚನೆ ನೀಡಿದೆ.
ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಸೇರಿದಂತೆ ಪ್ರಮುಖ ಆಟಗಾರರು ಗಾಯಗೊಂಡು ಹೊರಗುಳಿಯುವುದರೊಂದಿಗೆ ತಂಡಕ್ಕೆ ಹಿನ್ನಡೆ ಉಂಟಾಗಿದೆ. 2023ರಲ್ಲಿ ಏಕದಿನ ವಿಶ್ವಕಪ್ ಕೂಡ ಇರುವುದರಿಂದ ಆಟಗಾರರ ಫಿಟ್ನೆಸ್ ಮುಖ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಬಿಸಿಸಿಐ ಭಾರತ ತಂಡದ ಆಟಗಾರರ ಫಿಟ್‌ನೆಸ್ ಮೇಲೆ ಹೆಚ್ಚಿನ ಗಮನ ಹರಿಸಲಿದೆ. ಆಟಗಾರರ ಒತ್ತಡ ನಿರ್ವಹಣೆಯನ್ನು ಗಮನಿಸುವಂತೆ ಬಿಸಿಸಿಐ ಈಗಾಗಲೇ ಎನ್‌ಸಿಎಗೆ ಸೂಚನೆ ನೀಡಿದೆ. ಏಕದಿನ ವಿಶ್ವಕಪ್‌ನಲ್ಲಿ ಆಡಬಹುದಾದ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಹಾಕದಂತೆ ಸೂಚನೆ ನೀಡಿದೆ. ಎನ್‌ಸಿಎ ಫಿಸಿಯೋ ನಿತಿನ್ ಪಟೇಲ್ ಮತ್ತು ಭಾರತದ ಶಕ್ತಿ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರು ಜೂಮ್ ಕರೆ ಮೂಲಕ ಫ್ರಾಂಚೈಸಿಗಳಿಗೆ ಸಂದೇಶವನ್ನು ನೀಡಿದರು.

ನೆಟ್ಸ್‌ನಲ್ಲಿ ಅತಿಯಾಗಿ ಬೌಲಿಂಗ್ ಮಾಡಿಸದಂತೆ ಸಲಹೆ
"ಭಾರತ ತಂಡದ ಬೌಲರ್‌ಗಳನ್ನು ವಿಶೇಷವಾಗಿ ಎಚ್ಚರಿಕೆಯಿಂದ ಬಳಸಬೇಕು ಎಂದು ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ. ಐಪಿಎಲ್ ತಂಡಗಳು ಅವರನ್ನು ನೆಟ್ಸ್‌ನಲ್ಲಿ ಅತಿಯಾಗಿ ಬೌಲ್ ಮಾಡಬಾರದು. ತರಬೇತಿಯ ಮೇಲೆ ಹೆಚ್ಚು ಗಮನಹರಿಸಬಹುದು. ಆಟಗಾರರು ಫೀಲ್ಡಿಂಗ್ ಕಸರತ್ತುಗಳನ್ನು ಮಾಡಬಹುದು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಇಬ್ಬರೂ ಗಾಯಗಳಿಂದ ಬಳಲುತ್ತಿರುವುದರಿಂದ, ಉಳಿದ ಭಾರತೀಯ ಬೌಲಿಂಗ್ ದಾಳಿಯ ಮೇಲೆ ಕೇಂದ್ರೀಕರಿಸಲಾಗಿದೆ. ಪಂದ್ಯಾವಳಿಯ ಮೊದಲಾರ್ಧದಲ್ಲಿ ಮೊಹಮ್ಮದ್ ಶಮಿ ಮತ್ತು ಸಿರಾಜ್‌ರಂತಹ ಬೌಲರ್ ಗಳು ಶಕ್ತಿ ಮತ್ತು ಕಂಡೀಷನಿಂಗ್ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಫಿಸಿಯೋಗಳು ಸೂಚಿಸಿದ್ದಾರೆ. ಮೇ ತಿಂಗಳಲ್ಲಿ, ಬೌಲರ್‌ಗಳು ತಮ್ಮ ಬೌಲಿಂಗ್ ಸಮಯವನ್ನು ನೆಟ್ಸ್‌ನಲ್ಲಿ ಹೆಚ್ಚಿಸಬಹುದು.

ಆಟಗಾರರ ಬಗ್ಗೆ ಬಿಸಿಸಿಐ ವಿಶೇಷ ಕಾಳಜಿ
ಮೇ ಮೊದಲ ವಾರದ ನಂತರ, ಸ್ಪರ್ಧೆಯಲ್ಲಿರುವ ಆಟಗಾರರು ನಿಧಾನವಾಗಿ ತಮ್ಮ ಬೌಲಿಂಗ್ ಸಮಯವನ್ನು ನೆಟ್ಸ್‌ನಲ್ಲಿ ಹೆಚ್ಚಿಸಬಹುದು. ಬಿಸಿಸಿಐ ಮತ್ತೆ ಎಲ್ಲಾ ಫ್ರಾಂಚೈಸಿಗಳೊಂದಿಗೆ ಸಂಪರ್ಕದಲ್ಲಿರಲಿದೆ.
ಕಳೆದ 6 ತಿಂಗಳುಗಳಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ದೀಪಕ್ ಚಹಾರ್ ವಿಚಾರದಲ್ಲಿ ಅವಸರ ಮಾಡಿದ ಬಿಸಿಸಿಐ ಈಗ ಬೆಲೆಯನ್ನು ತೆತ್ತಿದೆ. ಮುಂಜಾಗ್ರತಾ ಕ್ರಮವಾಗಿ ರವೀಂದ್ರ ಜಡೇಜಾರನ್ನು ಹಲವು ಸರಣಿಯಿಂದ ಹೊರಗಿಡಲಾಯಿತು. ತಪ್ಪಿನಿಂದ ಎಚ್ಚೆತ್ತಿರುವ ಬಿಸಿಸಿಐ ಸದ್ಯ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೇವಲ ಒಂದು ವಾರ ಮೊದಲು ಮೇ 28 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಜೂನ್ 7 ರಿಂದ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಐಪಿಎಲ್‌ನಲ್ಲಿ ಆಡಲಿರುವ ಪ್ರಮುಖ ಭಾರತೀಯ ಬೌಲರ್ ಗಳು: ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಯದೇವ್ ಉನದ್ಕತ್.