ಕಳೆದ ಮೂರು ವರ್ಷ ಕಾಡಿದ್ದ ಕೋವಿಡ್ ಬಹುತೇಕ ಅಂತ್ಯವಾಗುವ ಹಾದಿಯಲ್ಲಿದೆ ಎನ್ನುವಾಗಲೇ ದೇಶದಲ್ಲಿ ಮತ್ತೆ ಕೋವಿಡ್ ಆತಂಕ ಮನೆಮಾಡಿದೆ. ದೇಶದಲ್ಲಿ ಕೋರೊನಾವೈರಸ್ ಪ್ರಕರಣಗಳ ಸಂಖ್ಯೆ ನಿಧಾನಕ್ಕೆ ಹೆಚ್ಚಾಗುತ್ತಿದೆ. ಇದು ಈಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಆತಂಕ ಹುಟ್ಟಿಸಿದ್ದು ಬಿಸಿಸಿಐ ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಬಿಸಿಸಿಐ ಸಲಹೆ ನೀಡಿದೆ.
ಮೂಲಗಳ ಮಾಹಿತಿಯ ಪ್ರಕಾರ ಬಿಸಿಸಿಐ ಫ್ರಾಂಚೈಸಿಗಳ ಮಾಲೀಕರಿಗೆ ಆಟಗಾರರು ಹಾಗೂ ಸಿಬ್ಬಂದಿಗಳ ಮೇಲೆ ಕೋವಿಡ್ 19 ನಿಯಂತ್ರಣದ ದೃಷ್ಟಿಯಿಂದ ಮುನ್ನೆಚ್ಚರಿಕೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕೆಂದು ಬಿಸಿಸಿಐ ಮನವಿ ಮಾಡಿದೆ.

"ಬಿಸಿಸಿಐ ಐಪಿಎಲ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಲ್ಲಿಯೂ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದೆ. ಕೋವಿಡ್ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದೆ ಎಂದು ನಮಗೆ ತಿಳಿದಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ನಾವು ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದೇವೆ. ಆಟಗಾರರ ಆರೋಗ್ಯ ಹಾಗೂ ಸುರಕ್ಷತೆ ನಮ್ಮ ಮೊದಲ ಪ್ರಾಮುಖ್ಯತೆ. ಸರ್ಕಾರದಿಂದ ಯಾವ ನಿರ್ದೇಶನಗಳು ಬರುತ್ತವೆಯೋ ಅದನ್ನು ಪಾಲಿಸುತ್ತೇವೆ. ನಮ್ಮ ತಂಡ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಈ ಹಂತದಲ್ಲಿ ಆತಂಕ ಪಡುವ ಪರಿಸ್ಥಿತಿಯಿಲ್ಲ" ಎಂದು ಫ್ರಾಂಚೈಸಿಯೊಂದರ ಪ್ರತಿನಿಧಿ ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ ಪ್ರಕರಣಗಳು ದೇಶದಲ್ಲಿ ನಿಧಾನವಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4435 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಛತ್ತೀಸ್‌ಘಡ್, ದೆಹಲಿ, ಗುಜರಾತ್, ಹರ್ಯಾಣ, ಕರ್ನಾಟಕ ಒಡಿಶಾ ಹಾಗೂ ಪಂಜಾಬ್‌ಗಳಲ್ಲಿ ತಲಾ ಒಂದು ಕೋವಿಡ್ ಸಾವುಗಳು ಕಳೆದ 24 ಗಂಟೆಗಳಲ್ಲಿ ಸಂಭವಿಸಿದೆ.
ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್‌ನ ಟೂರ್ನಿಗಳು ಭರ್ಜರಿಯಾಗಿ ನಡೆಯುತ್ತಿದ್ದು ಕ್ರಿಕೆಟ್ ಅಭಿಮಾನಿಗಳು ಆನಂದಿಸುತ್ತಿದ್ದಾರೆ. ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡಗಳ ನಡುವಿನ ಪಂದ್ಯ ನಡೆಯಲಿದ್ದು ಕೊಲ್ಕತ್ತಾದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಈ ಎರಡು ತಂಡಗಳಿಗೂ ಇದು ಎರಡನೇ ಪಂದ್ಯವಾಗಿದ್ದು ಆರ್‌ಸಿಬಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ ಕೆಕೆಆರ್ ಮೊದಲ ಪಂದ್ಯದಲ್ಲಿ ಸೋಲಿಕ ಕಹಿ ಅನುಭವಿಸಿತ್ತು.