ಸನ್‌ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿದ್ದು ಇತರ ತಂಡಗಳೊಂದಿಗೆ ಪೈಪೋಟಿ ಮುಂದುವರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಈ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದು ಹ್ಯಾರಿ ಬ್ರೂಕ್. ಈ ಬಾರಿಯ ಐಪಿಎಲ್‌ನ ಮೊದಲ ಶತಕ ಸಿಡಿಸಿದ ಬ್ರೂಕ್ ತನ್ನ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಈ ಭರ್ಜರಿ ಪ್ರದರ್ಶನದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹ್ಯಾರಿ ಬ್ರೂಕ್ ಬ್ಯಾಟಿಂಗ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದು ಬ್ರೂಕ್ ಯಾವುದೇ ತಂಡದ ವಿರುದ್ಧವಾದರೂ ಅದ್ಭುತವಾಗಿ ಪ್ರದರ್ಶನ ನೀಡಿ ಎದುರಾಳಿಗೆ ಆಘಾತ ನೀಡುವ ಸಾಮರ್ಥ್ಯಹೊಂದಿರುವ ಆಟಗಾರ ಎಂದು ಹೊಗಳಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಭುವನೇಶ್ವರ್ ಕುಮಾರ್ ಈ ಮಾತುಗಳನ್ನಾಡಿದ್ದಾರೆ. "ಹ್ಯಾರಿ ಬ್ರೂಕ್ ಅವರಿಂದ ಅತ್ಯುನ್ನತ ಮಟ್ಟದ ಪ್ರದರ್ಶನ ಹೊರಬಂದಿದೆ. ಆತನನ್ನು ತಂಡದಲ್ಲಿ ಹೊಂದಿರುವುದು ನಮ್ಮ ತಂಡಕ್ಕೆ ದೊಡ್ಡ ಬಲ. ಈತ ಯಾಔಉದೇ ತಂಡಕ್ಕಾದರೂ ಆಘಾತ ನೀಡಬಲ್ಲ ಸಾಮರ್ರ್ಥಯ ಹೊಂದಿದ್ದಾರೆ. ಹಾಗಾಗಿಯೇ ಆತನನ್ನು ಆರಂಬಿಕನಾಗಿ ಕಣಕ್ಕಿಳಿಸಲಾಗಿದೆ" ಎಂದಿದ್ದಾರೆ ಭುವನೇಶ್ವರ್ ಕುಮಾರ್.
ಅಂದ ಹಾಗೆ ಹ್ಯಾರಿ ಬ್ರೂಕ್ ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಹೀಗಾಗಿ ಬ್ರೂಕ್ ಸಾಮರ್ಥ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ರಿಸ್ಟ್ ಸ್ಪಿನ್ನರ್‌ಗಳ ವಿರುದ್ಧ ಬಹಳಷ್ಟು ಪರದಾಡುತ್ತಿರುವುದು ಮೇಲ್ನೋಟಕ್ಕೇ ಕಾಣುವಂತಿತ್ತು. ಹಾಗಾಗಿಯೇ ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿದ್ದ ಕೆಕೆಆರ್ ವಿರುದ್ಧ ಚಾಣಾಕ್ಷತನದ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್ ಕೆಕೆಆರ್ ತ್ರಿವಳಿ ಸ್ಪಿನ್ನರ್‌ಗಳ ವಿರುದ್ಧ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದು ಅಭಿಶೇಕ್ ಶರ್ಮಾ ಹಾಗೂ ಐಡೆನ್ ಮಾರ್ಕ್ರಮ್‌ಗೆ ಹೆಚ್ಚಿನ ಅವಕಾಶ ನೀಡಿದರು.
ಆದರೆ ವೇಗಿಗಳ ವಿರುದ್ಧ ಭರ್ಜರಿಯಾಗಿ ಬ್ಯಾಟ್ ಬೀಸಿದ ಬ್ರೂಕ್ ಬೃಹತ್ ಮೊತ್ತಕ್ಕೆ ಕಾರಣವಾದರು. ಅದರಲ್ಲೂ ಲೂಕಿ ಫರ್ಗ್ಯೂಸನ್ ದಾಳಿಯನ್ನು ಬ್ರೂಕ್ ಅಕ್ಷರಶಃ ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕೇವಲ 2 ಓವರ್‌ಗಳಲ್ಲಿ ಫರ್ಗ್ಯೂಸನ್ 37 ರನ್ ಬಿಟ್ಟುಕೊಡುವ ಮೂಲಕ ಅತ್ಯಂತ ದುಬಾರಿ ಎನಿಸಿದರು.
ಇನ್ನು ಈ ಬಾರಿಯ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನುಭವಿಸಿದ ಎರಡನೇ ಗೆಲುವಿನಲ್ಲಿ ಬ್ರೂನ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಗೆಲುವಿನಿಂದಾಗಿ ಎಸ್‌ಆರ್‌ಹೆಚ್ ತಂಡ ಅಮೂಲ್ಯ ಎರಡು ಅಂಕಗಳನ್ನು ಖಾತೆಗೆ ಸೇರಿಸಿಕೊಂಡಿದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನವನ್ನು ಹೊಂದಿದೆ.