
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಟೂರ್ನಿಯ ಲೀಗ್ ಹಂತದ 25 ಪಂದ್ಯಗಳು ಸದ್ಯ ನಿನ್ನೆ ( ಏಪ್ರಿಲ್ 18 ) ನಡೆದ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿವೆ.
ಟೂರ್ನಿಯ ಇನ್ನುಳಿದ 45 ಪಂದ್ಯಗಳು ಮೇ 21ರವರೆಗೆ ನಡೆಯಲಿವೆ. ಸದ್ಯ ಈಗಾಗಲೇ ಎಲ್ಲಾ ತಂಡಗಳ ನಡುವೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಗಿಟ್ಟಿಸಿಕೊಳ್ಳುವ ಪೈಪೋಟಿ ಆರಂಭಗೊಂಡಿದ್ದು, ದಿನದಿಂದ ದಿನಕ್ಕೆ ಪಂದ್ಯಗಳು ರೋಚಕತೆ ಹುಟ್ಟುಹಾಕುತ್ತಿವೆ.
ಇನ್ನು ಹಲವು ರಾಜ್ಯಗಳಲ್ಲಿ ವಿವಿಧ ಚುನಾವಣೆಗಳು ನಡೆಯುತ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೇಲೂ ಸಹ ಈ ಚುನಾವಣೆಗಳು ಪ್ರಭಾವವನ್ನು ಬೀರಿವೆ. ಸದ್ಯ ಮುಂದಿನ ತಿಂಗಳು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಕಾರಣ ಏಪ್ರಿಲ್ 26 ರ ಬಳಿಕ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳು ನಡೆಯುವುದಿಲ್ಲ. ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾದ ಬಳಿಕ ಮೇ 21ರಂದು ಮತ್ತೆ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯವೊಂದು ನಡೆಯಲಿದೆ.
ಈ ರೀತಿ ಕರ್ನಾಟಕ ವಿಧಾನಸಭೆ ಚುನಾವಣೆ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಪ್ರಭಾವ ಬೀರಿದ್ದರೆ, ಇದೀಗ ಮತ್ತೊಂದು ಚುನಾವಣೆ ಸಹ ಟೂರ್ನಿ ಮೇಲೆ ಪ್ರಭಾವ ಬೀರಿದೆ. ಪರಿಣಾಮ ಟೂರ್ನಿಯ ಪಂದ್ಯವೊಂದು ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ನಡೆಯಲಿದೆ.
ಹೌದು, ಮೇ 4ರಂದು ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಮೇ 3ರಂದೇ ನಡೆಯಲಿದೆ. ಮೇ 4ರಂದು ನಡೆಯಬೇಕಿದ್ದ ಈ ಪಂದ್ಯ ಒಂದು ದಿನ ಮುಂಚಿತವಾಗಿ ನಡೆಯಲು ಕಾರಣ ಲಕ್ನೋ ನಗರದಲ್ಲಿ ಮೇ 4ರಂದು ನಡೆಯಲಿರುವ ಮುನ್ಸಿಪಾಲ್ ಎಲೆಕ್ಷನ್ಸ್. ಹೌದು, ಮೇ4ರಂದು ಚುನಾವಣೆ ಇರುವ ಕಾರಣ ಆ ದಿನ ರಾತ್ರಿ ನಡೆಯಬೇಕಿದ್ದ ಪಂದ್ಯ ಮೇ 3ರಂದು ಲಕ್ನೋದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

ಇನ್ನು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಹಾಗೂ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೆರಡೂ ಟೂರ್ನಿಯ 25 ಪಂದ್ಯಗಳು ಮುಕ್ತಾಯವಾದ ಬಳಿಕ ಅಂಕಪಟ್ಟಿಯಲ್ಲಿ ಒಳ್ಳೆಯ ಸ್ಥಾನದಲ್ಲಿಯೇ ಇವೆ.
5 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳ ಸೋಲನ್ನು ಕಂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ 6 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ 5 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳ ಸೋಲನ್ನು ಕಂಡು 6 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇನ್ನು ಈ ಪಂದ್ಯ ಇತ್ತಂಡಗಳ ನಡುವೆ ನಡೆಯಲಿರುವ ಈ ಬಾರಿಯ ಟೂರ್ನಿಯ ಎರಡನೇ ಮುಖಾಮುಖಿಯಾಗಿದ್ದು, ಮೊದಲ ಮುಖಾಮುಖಿ ಏಪ್ರಿಲ್ 3ರಂದು ನಡೆದಿತ್ತು. ಚೆನ್ನೈನ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಫೀಲ್ಡಿಂಗ್ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು.
ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ ಹಾಗೂ ಡಿವಾನ್ ಕಾನ್ವೆ ಅಬ್ಬರದ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 218 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೈಲ್ ಮೇಯರ್ಸ್ ಅಬ್ಬರದ ನಡುವೆಯೂ ವಿಫಲವಾಗಿತ್ತು. 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್‌ಗಳನ್ನು ಕಲೆಹಾಕಿತ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 12 ರನ್‌ಗಳ ಗೆಲುವನ್ನು ಕಂಡಿತ್ತು.