
ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ನಿನ್ನೆ ( ಮೇ 28 ) ಎಲ್ಲಾ ಅಂದುಕೊಂಡಂತೆ ಜರುಗಿದ್ದರೆ ಟೂರ್ನಿಯ ಫೈನಲ್ ಪಂದ್ಯ ಜರುಗಬೇಕಿತ್ತು. ಆದರೆ ಮಳೆ ಕಾರಣದಿಂದಾಗಿ ಈ ಪಂದ್ಯ ಆರಂಭವಾಗದೇ ಮುಂದೂಡಲ್ಪಟ್ಟಿದೆ.
ಹೌದು, ನಿನ್ನೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮಹತ್ವದ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಫೈನಲ್ ಪಂದ್ಯ ಮಳೆ ಅಡ್ಡಿಯುಂಟಾದ ಕಾರಣ ಟಾಸ್ ಕೂಡ ಜರುಗದೇ ನಾಳೆಗೆ ( ಮೇ 29, ರಿಸರ್ವ್ ಡೇ ) ಮುಂದೂಡಲ್ಪಟ್ಟಿದೆ.
ಹೀಗೆ ಪಂದ್ಯ ಮುಂದೂಲ್ಪಟ್ಟದ್ದು ಒಂದೆಡೆಯಾದರೆ ಈ ಪಂದ್ಯ ಆರಂಭಗೊಳ್ಳುವುದಕ್ಕೆ ಇನ್ನೇನೂ ಕೆಲವೇ ನಿಮಿಷಗಳು ಬಾಕಿ ಇವೆ ಎನ್ನುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಓರ್ವ ಐಪಿಎಲ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಾಟಿ ರಾಯುಡು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅಂಬಾಟಿ ರಾಯುಡು " ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ರೀತಿಯ 2 ಶ್ರೇಷ್ಠ ತಂಡಗಳು, 204 ಪಂದ್ಯಗಳು, 14 ಸೀಸನ್‌ಗಳು, 11 ಪ್ಲೇಆಫ್‌ಗಳು, 8 ಫೈನಲ್‌ಗಳು, 5 ಟ್ರೋಫಿಗಳು. ಇಂದು ರಾತ್ರಿ ಆರನೇ ಟ್ರೋಫಿ ಬಂದರೂ ಬರಬಹುದು. ಇದು ಡೊಡ್ಡ ಪ್ರಯಾಣವಾಗಿದೆ. ಇವತ್ತಿನ ರಾತ್ರಿಯ ಫೈನಲ್ ಐಪಿಎಲ್‌ನಲ್ಲಿ ನನ್ನ ಕೊನೆಯ ಪಂದ್ಯ ಎಂದು ನಾನು ನಿರ್ಧರಿಸಿದ್ದೇನೆ. ನಾನು ಈ ಉತ್ತಮ ಟೂರ್ನಿಯನ್ನು ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಈ ಬಾರಿ ಯು ಟರ್ನ್ ಇಲ್ಲ" ಎಂದು ಬರೆದುಕೊಂಡಿದ್ದಾರೆ.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಮೈಲಿಗಲ್ಲುಗಳನ್ನು ಹಂಚಿಕೊಂಡಿರುವ ಅಂಬಾಟಿ ರಾಯುಡು ಕಳೆದ ವರ್ಷದ ಹಾಗೆ ನಿವೃತ್ತಿ ಘೋಷಿಸಿ ಮತ್ತೆ ಬಂದ ಹಾಗೆ ಈ ಬಾರಿ ಬರುವುದಿಲ್ಲ ಎಂದಿದ್ದಾರೆ. ಹೌದು, ಕಳೆದ ವರ್ಷ ಅಂಬಾಟಿ ರಾಯುಡು ಟ್ವೀಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದರು ಹಾಗೂ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಮಾಡಿದ್ದರು.
ಹೀಗೆ ಕಳೆದ ಬಾರಿಯ ಹಾಗೆ ಈ ಬಾರಿ ಯು ಟರ್ನ್ ತೆಗೆದುಕೊಳ್ಳುವುದಿಲ್ಲ ಎಂದೂ ಸಹ ಅಂಬಾಟಿ ರಾಯುಡು ತಿಳಿಸಿದ್ದಾರೆ. ಇನ್ನು ಅಂಬಾಟಿ ರಾಯುಡು 2010ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಐಪಿಎಲ್ ಆಡುತ್ತಿದ್ದು, 2010ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ತಂಡದ ಪರ ಹಾಗೂ 2018ರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ.
ಒಟ್ಟು 203 ಪಂದ್ಯಗಳನ್ನು ಆಡಿರುವ ಅಂಬಾಟಿ ರಾಯುಡು 4329 ರನ್‌ಗಳನ್ನು ಕಲೆಹಾಕಿದ್ದು, ಒಂದು ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿದ್ದಾರೆ.