ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅದ್ಭುತ ಪೈಪೋಟಿ ನೀಡಿದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸಿಎಸ್‌ಕೆ ವಿರುದ್ಧ 12 ರನ್‌ಗಳ ಅಂತರದಿಂದ ಕೆಎಲ್ ರಾಹುಲ್ ಪಡೆ ಸೋಲು ಕಂಡಿದೆ. ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ತಂಡ ಎಲ್ಲಿ ಎಡವಿತು ಎಂಬುದನ್ನು ವಿವರಿಸಿದ್ದಾರೆ. ಕೆಲ ಸಣ್ಣ ಸಣ್ಣ ಅಂಗತಿಗಳನ್ನು ಬಾಚಿಕೊಳ್ಳುವಲ್ಲಿ ನಾವು ವಿಫಲವಾಗಿದ್ದು ಸೋಲಿಗೆ ಕಾರಣವಾಯಿತು ಎಂದಿದ್ದಾರೆ ಕೆಎಲ್ ರಾಹುಲ್.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ ತಂಡಕ್ಕೆ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಅಮೋಘ ಆರಂಭ ನೀಡಿದರು. ಈ ಜೋಡಿಯ ಅದ್ಭುತ ಪ್ರದರ್ಶನದಿಂದಾಗಿ ಸಿಎಸ್‌ಕೆ ತಂಡ ನಿಗದಿತ 20 ಓವರ್‌ಗಳಲ್ಲಿ 217 ರನ್‌ಗಳನ್ನು ಗಳಿಸಲು ಯಶಸ್ವಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಎಲ್‌ಎಸ್‌ಜಿ ತಂಡಕ್ಕೂ ಅದ್ಭುತ ಆರಂಭ ದೊರೆಯಿತಾದರೂ ಗೆಲುವು ಸಾಧ್ಯವಾಗಲಿಲ್ಲ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕೇಲ್ ಮೇಯರ್ಸ್ ಸತತ ಎರಡನೇ ಅರ್ಧ ಶತಕ ಬಾರಿಸಿ ಅಬ್ಬರಿಸಿದರು. ಆದರೆ ಮೇಯರ್ಸ್ ಮೊಯೀನ್ ಅಲಿಗೆ ವಿಕೆಟ್ ನೀಡುವ ಮೂಲಕ ಎಲ್‌ಎಸ್‌ಜಿ ಇನ್ನಿಂಗ್ಸ್ ಕಳಗುಂದಲು ಆರಂಭಿಸಿತು. ಈ ಪಂದ್ಯದಲ್ಲಿ ಸಿಎಸ್‌ಕೆ ಸ್ಪಿನ್ನರ್ ಮೊಯೀನ್ ಅಲಿ 4 ವಿಕೆಟ್ ಕಿತ್ತು ರಾಹುಲ್ ಪಡೆಗೆ ದೊಡ್ಡ ಆಘಾತ ನೀಡಿದರು. ಅಂತಿಮವಾಗಿ ಸಿಎಸ್‌ಕೆ ತಂಡ ಚೆಪಾಕ್ ಕ್ರೀಡಾಂಗಣದಲ್ಲಿ ಭರ್ಜರಿ 12 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.
ಈ ಸೋಲಿನ ಬಳಿಕ ನಾಯಕ ಕೆಎಲ್ ರಾಹುಲ್ ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ. "ಟಾಸ್ ಗೆದ್ದ ಬಳಿಕ ನಮಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಆರಂಭಿಕ ಕೆಲ ಓವರ್‌ಗಳಲ್ಲಿ ಪಿಚ್ ಚಲನಶೀಲವಾಗಿತ್ತು. ಆದರೆ ನಾವು ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡಲಿಲ್ಲ ಹಾಗಾಗಿ ಹೆಚ್ಚಿನ ರನ್‌ಗಳು ಹರಿದುಹೋದವು. ಇಂಥಾ ಸಂದರ್ಭದಲ್ಲಿ ಎದುರಾಳಿ ತಂಡಲ್ಲಿ ಗುಣಮಟ್ಟದ ಬ್ಯಾಟರ್‌ಗಳು ಇದ್ದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ" ಎಂದಿದ್ದಾರೆ
ಮುಂದುವರಿದು ಅವರು "ನಾವು ಕೆಲ ಸಂಗತಿಗಳನ್ನು ಕಲಿತುಕೊಳ್ಳಬೇಕಿದೆ. ಆದರೆ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಅದ್ಭುತವಾದ ಇನ್ನಿಂಗ್ಸ್ ಆಡಿದರು. ಈ ಪಿಚ್‌ನಲ್ಲಿ ಯಾವ ಲೆಂತ್‌ನಲ್ಲಿ ಬೌಲಿಂಗ್ ನಡೆಸಬೇಕು ಎಂಬುದನ್ನು ಅರಿತುಕೊಳ್ಳಲು ಕೆಲ ಸಮಯ ಬೇಕಾಯಿತು. ಆದರೆ 6 ಓವರ್‌ಗಳಲ್ಲಿ 70ಕ್ಕೂ ಅಧಿಕ ರನ್‌ಗಳನ್ನು ಬಿಟ್ಟುಕೊಡುವುದು ಉತ್ತಮ ಸಂಗತಿಯಲ್ಲ" ಎಂದಿದ್ದಾರೆ ಕೆಎಲ್ ರಾಹುಲ್.
"ನಾವು ಉತ್ತಮವಾಗಿ ಬ್ಯಾಟಿಂಗ್ ನಡೆಸಿದೆವು. ಆದರೆ ಕೆಲ ಸಣ್ಣ ಸಣ್ಣ ವಿಚಾರಗಳನ್ನು ಬಳಸಿಕೊಳ್ಳಲು ವಿಫಲವಾದೆವು. ಮೇಯರ್ಸ್ ಉತ್ತಮ ಫಾರ್ಮ್‌ನಲ್ಲಿದ್ದು ಅವರಿಂದ ಅದ್ಭುತವಾದ ಪ್ರದರ್ಶನ ಬರುತ್ತಿದೆ. ಬಿಷ್ಣೋಯ್ ಜೊತೆಗೆ ಬಹಳ ಕಾಲದಿಂದ ಆಡುತ್ತಿದ್ದು ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ವಿಕೆಟ್ ತೆಗೆಯುತ್ತಿದ್ದಾರೆ. ಈ ರೀತಿಯ ಪ್ರದರ್ಶನಗಳನ್ನು ನೋಡಿದಾಗ ಸಂತಸವಾಗುತ್ತದೆ" ಎಂದಿದ್ದಾರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್.
ಇನ್ನು ಇದಕ್ಕೂ ಮುನ್ನ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೂಡ ಪ್ರತಿಕ್ರಿಯೆ ನೀಡಿದರು. ತಂಡ ಸುದೀರ್ಘ ಕಾಲದ ಬಳಿಕ ತವರಿನ ಅಂಗಳವಾದ ಚೆಪಾಕ್‌ನಲ್ಲಿ ಭರ್ಜರಿಯಾಗಿ ಗೆದ್ದುಕೊಂಡರು ಕೂಡ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನಕ್ಕೆ ಧೋನಿ ಬೇಸರ ವ್ಯಕ್ತಪಡಿಸಿದ್ದಾರೆ. ವೈಟ್ ಹಾಗೂ ನೋ ಬಾಲ್ ಎಸೆಯುವುದನ್ನು ಕಡಿತ ಮಾಡದಿದ್ದರೆ ಬೇರೆ ನಾಯಕತ್ವದಲ್ಲಿ ಆಡಬೇಕಾಗುತ್ತದೆ" ಎಂದು ಧೋನಿ ತಂಡದ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.