IPL 2023 CSK vs RR: ಧೋನಿ ಹೋರಾಟ ವ್ಯರ್ಥ: ಸಂದೀಪ್ ಶರ್ಮಾ ಮ್ಯಾಜಿಕ್, ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ 17ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ರನ್‌ಗಳ ರೋಚಕ ಜಯ ಸಾಧಿಸಿದೆ. ನಾಯಕ ಎಂಎಸ್ ಧೋನಿ ಸ್ಫೋಟಕ ಇನ್ನಿಂಗ್ಸ್ ಮೂಲಕ ಗೆಲುವಿನ ಭರವಸೆ ಮೂಡಿಸಿದರೂ, ಕೊನೆಯ ಎಸೆತದಲ್ಲಿ ಯಾರ್ಕರ್ ಮೂಲಕ ಧೋನಿಯನ್ನು ಕಟ್ಟಿಹಾಕಿದ ಸಂದೀಪ್ ಶರ್ಮಾ ರಾಜಸ್ಥಾನಕ್ಕೆ ರೋಚಕ ಗೆಲುವು ತಂದುಕೊಟ್ಟರು. 15 ವರ್ಷಗಳ ಬಳಿಕ ರಾಜಸ್ಥಾನ ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಜೋಸ್ ಬಟ್ಲರ್ ಅರ್ಧಶತಕ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಸರೆಯಾದರು.

ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಸವಾಲಿನ ಮೊತ್ತವನ್ನು ಕಲೆಹಾಕಿತು. ಯಶಸ್ವಿ ಜೈಸ್ವಾಲ್ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು. ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ಎರಡನೇ ವಿಕೆಟ್‌ಗೆ 77 ರನ್‌ಗಳನ್ನು ಕಲೆಹಾಕಿದರು. ಪಡಿಕ್ಕಲ್ 26 ಎಸೆತಗಳಲ್ಲಿ 38 ರನ್ ಗಳಿಸಿದರು.
ಜಡೇಜಾ ಉತ್ತಮ ಬೌಲಿಂಗ್
ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಫಲ್ಯ ಮುಂದುವರೆಯಿತು ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಜಡೇಜಾಗೆ ಕ್ಲೀನ್ ಬೌಲ್ಡ್ ಆದರು. ಅಚ್ಚರಿ ಎನ್ನುವಂತೆ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್ 22 ಎಸೆತಗಳಲ್ಲಿ 1 ಬೌಂಡರಿ ಎರಡು ಸಿಕ್ಸರ್ ಸಹಿತ 30 ರನ್ ಗಳಿಸಿದರು. ಜೋಸ್ ಬಟ್ಲರ್ 36 ಎಸೆತಗಳಲ್ಲಿ 52 ರನ್ ಗಳಿಸಿದರು.
ಶಿಮ್ರಾನ್ ಹೆಟ್ಮೇರ್ 18 ಎಸೆತಗಳಲ್ಲಿ 30 ರನ್ ಗಳಿಸಿದರು. ರವೀಂದ್ರ ಜಡೇಜಾ 4 ಓವರ್ ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು. ಆಕಾಶ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಮೊಯೀನ್ ಅಲಿ ಕೂಡ ಒಂದು ವಿಕೆಟ್ ಪಡೆದರು.

ಜಡೇಜಾ, ಧೋನಿ ಹೋರಾಟ ವ್ಯರ್ಥ
ಸವಾಲಿನ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು, ಉತ್ತಮ ಫಾರ್ಮ್‌ನಲ್ಲಿದ್ದ ಆಟಗಾರ ರುತುರಾಜ್ ಗಾಯಕ್ವಾಡ್ 8 ರನ್ ಗಳಿಸಿ ಔಟಾದರು. ಡಿವೋನ್ ಕಾನ್ವೆ 38 ಎಸೆತಗಳಲ್ಲಿ 50 ರನ್ ಗಳಿಸಿದರು. ಅಜಿಂಕ್ಯ ರಹಾನೆ 19 ಎಸೆತಗಳಲ್ಲಿ 31 ರನ್ ಗಳಿಸಿ ಚೆನ್ನೈಗೆ ಸುಲಭ ಗೆಲುವಿನ ನಿರೀಕ್ಷೆ ಮೂಡಿಸಿದರು.
ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಾಲ್ ಮತ್ತು ಆಡಂ ಝಂಪಾ ಚೆನ್ನೈ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಶಿವಂ ದುಬೆ 8, ಮೊಯೀನ್ ಅಲಿ 7, ಅಂಬಾಟಿ ರಾಯುಡು 1 ರನ್ ಗಳಿಸಿ ಔಟಾಗಿದ್ದು ತಂಡಕ್ಕೆ ಭಾರಿ ಹಿನ್ನಡೆಯಾಯಿತು. ಧೋನಿ ಕ್ರೀಸ್‌ಗೆ ಬಂದಾಗ ಕೊನೆಯ ಮೂರು ಓವರ್ ಗಳಲ್ಲಿ ಸಿಎಸ್‌ಕೆ ಗೆಲುವಿಗೆ 54 ರನ್ ಬೇಕಿತ್ತು.
ಅಂತಿಮ ಓವರ್ ನಲ್ಲಿ ನಾಟಕೀಯ ತಿರುವು
18ನೇ ಓವರ್ ನಲ್ಲಿ 14 ರನ್ ಗಳಿಸಿದರೆ, 19ನೇ ಓವರ್ ನಲ್ಲಿ 19 ರನ್ ಬಂದವು, ಕೊನೆಯ ಓವರ್ ನಲ್ಲಿ ಸಿಎಸ್‌ಕೆ ಗೆಲುವಿಗೆ 21 ರನ್ ಬೇಕಿತ್ತು ಸಂದೀಪ್ ಶರ್ಮಾ ಮೊದಲ ಎರಡು ಚೆಂಡುಗಳನ್ನು ವೈಡ್ ಎಸೆದರು. ಮೊದಲನೇ ಲೀಗಲ್ ಎಸೆತದಲ್ಲಿ ಯಾರ್ಕರ್ ಮಾಡಿ ಯಾವುದೇ ರನ್ ನೀಡಲಿಲ್ಲ, ಎರಡು ಮತ್ತು ಮೂರನೇ ಎಸೆತವನ್ನು ಸಿಕ್ಸರ್ ಹೊಡೆಯುವ ಮೂಲಕ ಧೋನಿ ಗೆಲುವಿನ ಸನಿಹ ತಂದರು.
4 ನೇ ಎಸೆತದಲ್ಲಿ ಮತ್ತೆ ಯಾರ್ಕರ್ ಎಸೆದು ಒಂದು ರನ್ ನೀಡಿದರು, 5ನೇ ಎಸೆತದಲ್ಲಿ ಕೂಡ ಒಂದು ರನ್ ಬಂದಿತು. ಕೊನೆಯ ಎಸೆತದಲ್ಲಿ ಸಿಎಸ್‌ಕೆ ಗೆಲುವಿಗೆ 5 ರನ್ ಬೇಕಿತ್ತು, ಒಂದು ಬೌಂಡರಿ ಹೊಡೆದರೆ ಪಂದ್ಯ ಡ್ರಾ ಆಗುತ್ತಿತ್ತು, ಜಗತ್ತು ಕಂಡ ಶ್ರೇಷ್ಠ ಫಿನಿಶರ್ ಧೋನಿ ಕ್ರೀಸ್‌ನಲ್ಲಿದ್ದರು, ಆದರೆ ಸಂದೀಪ್ ಶರ್ಮಾ ಮತ್ತೆ ಉತ್ತಮ ಯಾರ್ಕರ್ ಹಾಕುವ ಮೂಲಕ ಕೇವಲ ಒಂದು ರನ್ ನೀಡಿ ತಂಡಕ್ಕೆ ಜಯ ತಂದುಕೊಟ್ಟರು. ಸಿಎಸ್‌ಕೆ ಈ ಆವೃತ್ತಿಯಲ್ಲಿ ತವರಿನಲ್ಲಿ ಮೊದಲನೇ ಸೋಲು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications