
ಐಪಿಎಲ್ 2023ರ ಆವೃತ್ತಿಗೆ ಎಲ್ಲಾ ತಂಡಗಳು ಈಗಾಗಲೇ ನಾಯಕನ ಹೆಸರು ಘೋಷಣೆ ಮಾಡಿವೆ. ಸನ್‌ರೈಸರ್ಸ್ ಹೈದರಾಬಾದ್ ಏಡೆನ್ ಮಾರ್ಕ್ರಾಮ್ ಅವರನ್ನು ನಾಯರನ್ನಾಗಿ ಆಯ್ಕೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ತಂಡದ ನಾಯಕನ ಹೆಸರನ್ನು ಘೋಷಣೆ ಮಾಡಲು ಸಜ್ಜಾಗಿದೆ.
ತಂಡದ ನಾಯಕ ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಐಪಿಎಲ್‌ನಿಂದ ಹೊರಗುಳಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ.
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ತಲೆ ಮತ್ತು ತೋಳಿಗೆ ಚೆಂಡು ತಾಗಿ ಗಾಯಗೊಂಡು ಸರಣಿಯಿಂದ ವಾರ್ನರ್ ಹೊರಬಿದ್ದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂಕಟ ಎದುರಾಗಿತ್ತು. ಆದರೆ, ವಾರ್ನರ್ ಭಾರತದ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವುದರಿಂದ ಅವರು ಐಪಿಎಲ್‌ಗೆ ಫಿಟ್ ಆಗುವುದು ಖಚಿತವಾಗಿದೆ.
ಟೆಸ್ಟ್ ಸರಣಿಯಲ್ಲಿ ವಾರ್ನರ್ ವಿಫಲರಾಗಿದ್ದರೂ ವಾರ್ನರ್ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅವರು ತಂಡವನ್ನು ಒಂದು ಬಾರಿ ಚಾಂಪಿಯನ್ ಕೂಡ ಮಾಡಿದ್ದಾರೆ. ಅವರ ನಾಯಕತ್ವದ ಅನುಭವವನ್ನು ಪರಿಗಣಿಸಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ ಮೊದಲನೇ ಆಯ್ಕೆಯಾಗಿರಲಿದ್ದಾರೆ.

ಅಕ್ಷರ್ ಪಟೇಲ್‌ಗೆ ಉಪನಾಯಕನಪಟ್ಟ
ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕನಾದರೆ, ಭಾರತ ತಂಡದ ಭರವಸೆಯ ಆಲ್‌ರೌಂಡರ್ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕನಾಗಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಅಕ್ಷರ್ ಪಟೇಲ್ ಸದ್ಯ ಭರವಸೆಯ ಆಲ್‌ರೌಂಡರ್ ಎನಿಸಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾದರೆ, ಅಕ್ಷರ ಪಟೇಲ್ ಉಪನಾಯಕನಾಗುತ್ತಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕತ್ವದ ಗುಂಪಿನ ಸದಸ್ಯರೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಏಪ್ರಿಲ್ 1ರಂದು ಮೊದಲನೇ ಪಂದ್ಯ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2023 ರ ಆವೃತ್ತಿಯ ತನ್ನ ಮೊದಲನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್ , ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಒಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಖೇಶ್ ಕುಮಾರ್, ಮನೀಷ್ ಪಾಂಡೆ, ರಿಲೀ ರೊಸೌವ್, ರಿಷಬ್ ಪಂತ್ (ಐಪಿಎಲ್‌ನಿಂದ ಹೊರಗುಳಿದಿದ್ದಾರೆ).