
ಮೊನ್ನೆ ( ಮೇ 1 ) ಸೋಮವಾರ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಎರಡು ದಿನಗಳು ಕಳೆದರೂ ಸಹ ಇನ್ನೂ ಸಹ ಭಾರೀ ಚರ್ಚೆಗೆ ಒಳಪಟ್ಟಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ರನ್‌ಗಳ ಗೆಲುವನ್ನು ಸಾಧಿಸಿದ ಬಳಿಕ ನಡೆದ ಘಟನೆಗಳು ಇಷ್ಟರಮಟ್ಟಿಗಿನ ಚರ್ಚೆಗೆ ಕಾರಣವಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರ ನಡುವೆ ನಡೆದ ಜಗಳಗಳು ಸದ್ಯ ಟ್ರೆಂಡಿಂಗ್ ವಿಷಯಗಳಾಗಿವೆ.
ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಶ್ ಎಂದು ನಾನು ಹೇಳುವುದಿಲ್ಲ, ನಾನು ನಿಮ್ಮನ್ನೆಲ್ಲಾ ಇಷ್ಟಪಡುತ್ತೇನೆ ಎಂದು ಸನ್ನೆ ಮಾಡುವ ಮೂಲಕ ಕಳೆದ ಪಂದ್ಯದಲ್ಲಿ ಗಂಭೀರ್ ಮಾಡಿದ ಕೆಲಸಕ್ಕೆ ಕೌಂಟರ್ ನೀಡಿದ್ದರು. ಅಲ್ಲದೇ ಪಂದ್ಯದ 17ನೇ ಓವರ್‌ನಲ್ಲಿ ನವೀನ್ ಉಲ್ ಹಕ್ ಮತ್ತು ಅಮಿತ್ ಮಿಶ್ರಾ ಜತೆಗೆ ಜಗಳವಾಡಿದ್ದರು.
ಅಲ್ಲದೇ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಕೈಕುಲಕುವ ವೇಳೆ ಒಬ್ಬರೂ ಜೋರಾಗಿ ಕೈಹಿಡಿದು ಎಳೆದಿದ್ದರು. ನಂತರ ಕೊಹ್ಲಿ ಕೈಲ್ ಮೇಯರ್ಸ್ ಜತೆ ಮಾತನಾಡುತ್ತಿದ್ದಾಗ ಗೌತಮ್ ಗಂಭೀರ್ ಬಂದು ಮೇಯರ್ಸ್ ಅನ್ನು ಬದಿಗೆ ಎಳೆದೊಯ್ದಿದ್ದರು. ಬಳಿಕ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ತೀವ್ರ ವಾಕ್ಸಮರ ನಡೆಸಿದ್ದರು.
ಆದರೆ ಕ್ರಿಕೆಟ್ ಪ್ರೇಮಿಗಳು ಹಾಗೂ ಆಟಗಾರರ ಅಭಿಮಾನಿಗಳಿಗೆ ಇಲ್ಲಿ ಅಸಲಿಗೆ ನಡೆದದ್ದೇನು, ಇಬ್ಬರ ಜಗಳದಲ್ಲಿ ನಡೆದ ಸಂಭಾಷಣೆ ಏನು ಎಂಬುದು ಮಾತ್ರ ತಿಳಿಯಲಿಲ್ಲ. ಎಲ್ಲರೂ ಈ ವಿಷಯದ ಬಗ್ಗೆ ಕುತೂಹಲವನ್ನು ಹೊಂದಿದ್ದರು. ಈ ಕುರಿತು ಇದೀಗ ಪ್ರತ್ಯಕ್ಷದರ್ಶಿಯೊಬ್ಬರು ಇಲ್ಲಿ ನಡೆದದ್ದೇನು ಎಂಬುದನ್ನು ನ್ಯೂಸ್ ಏಜೆನ್ಸಿ ಪಿಟಿಐ ಜತೆ ಹಂಚಿಕೊಂಡಿದ್ದಾರೆ.
"ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಮೇಯರ್ಸ್ ಜತೆಗೆ ಕೆಲ ಸಮಯ ಹೆಜ್ಜೆ ಹಾಕಿದ್ದನ್ನು ನೀವು ಟಿವಿಯಲ್ಲಿ ನೋಡಿರುತ್ತೀರಿ. ಈ ವೇಳೆ ಮೇಯರ್ಸ್ ಪಂದ್ಯದುದ್ದಕ್ಕೂ ಏಕೆ ತನ್ನನ್ನು ಹಾಗೂ ತಂಡದ ಇತರೆ ಆಟಗಾರರನ್ನು ನೀವು ನಿಂದಿಸುತ್ತಿದ್ರಿ ಎಂದು ಕೊಹ್ಲಿಯನ್ನು ಕೇಳಿದ್ದರು. ಇದಕ್ಕುತ್ತರಿಸಿದ ಕೊಹ್ಲಿ ನೀವು ಏಕೆ ನನ್ನನ್ನು ದಿಟ್ಟಿಸಿ ನೋಡಿದ್ರಿ ಎಂದು ಮರುಪ್ರಶ್ನೆ ಹಾಕಿದ್ದರು. ಇದಕ್ಕೂ ಮುನ್ನ ಅಮಿತ್ ಮಿಶ್ರಾ ಕೊಹ್ಲಿ ಸತತವಾಗಿ ನವೀನ್ ಉಲ್ ಹಕ್ ಅವರನ್ನು ನಿಂದಿಸುತ್ತಿದ್ದಾರೆ ಎಂದು ಕೂಡ ಅಂಪೈರ್ ಬಳಿ ದೂರು ನೀಡಿದ್ರು" ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು "ಕೊಹ್ಲಿ ಹಾಗೂ ಮೇಯರ್ಸ್ ನಡುವಿನ ಸಂಭಾಷಣೆ ಇನ್ನೂ ಕೆಟ್ಟ ಹಂತ ತಲುಪಬಹುದು ಎಂಬ ಕಾರಣಕ್ಕೆ ಮೇಯರ್ಸ್ ಬಳಿ ಬಂದ ಗಂಭೀರ್ ಮಾತು ಮುಂದುವರಿಸಬೇಡ ಬಾ ಎಂದು ಬದಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಕಾಮೆಂಟ್ ಮಾಡಿದ್ದಕ್ಕೆ ಪರಿಸ್ಥಿತಿ ಹದಗೆಟ್ಟಿತು" ಎಂದರು.
"ಈ ವೇಳೆ ಕೊಹ್ಲಿ ಕಡೆ ಬಂದ ಗೌತಮ್ ಗಂಭೀರ್ 'ಏನು ಹೇಳ್ದೆ ನೀನು?' ಎಂದು ಕಿಡಿಕಾರಿದರು. ಇದಕ್ಕುತ್ತರಿಸಿದ ಕೊಹ್ಲಿ 'ನಾನು ನಿನಗೆ ಏನನ್ನೂ ಹೇಳಿಲ್ಲ, ನೀನೇಕೆ ಮಧ್ಯ ಬರುತ್ತಿದ್ದೀಯ?' ಎಂದು ಮರುಪ್ರಶ್ನೆ ಹಾಕಿದರು. ಗಂಭೀರ್ 'ನೀನು ನನ್ನ ತಂಡದ ಆಟಗಾರರನ್ನು ನಿಂದಿಸಿದ್ದೀಯ.. ಅವರನ್ನು ನಿಂದಿಸಿದರೆ ನನ್ನ ಕುಟುಂಬವನ್ನು ನಿಂದಿಸಿದಂತೆ' ಎಂದರು. ಈ ವೇಳೆ ಕೊಹ್ಲಿ 'ಹಾಗಾದರೆ ನೀನು ನಿನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊ' ಎಂದು ಟಾಂಗ್ ನೀಡಿದರು. ಕೊನೆಯದಾಗಿ ಗಂಭೀರ್ 'ನಾನು ಇದನ್ನೆಲ್ಲಾ ನಿನ್ನಿಂದ ಕಲಿಯಬೇಕಾಗಿದೆಯಾ..' ಎಂದರು" ಎಂದು ಆ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಹೀಗೆ ಪಂದ್ಯದ ನಂತರ ಅಸಲಿಗೆ ನಡೆದದ್ದೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.