
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ನಾಯಕನಾಗಿ ನಿತೀಶ್ ರಾಣಾ ಆಯ್ಕೆಯಾಗಿದ್ದಾರೆ. ತಂಡದ ನಾಯುಕ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣ ಐಪಿಎಲ್‌ನಿಂದ ಹೊರುಗುಳಿಯಲಿದ್ದಾರೆ. ಈ ಕಾರಣದಿಂದ ಕೆಕೆಆರ್ ಅನಿವಾರ್ಯವಾಗಿ ಹೊಸ ನಾಯಕನ ನೇಮಕ ಮಾಡಿದೆ. ಸೋಮವಾರ ಅವರು ನಿತೀಶ್ ರಾಣಾ ಐಪಿಎಲ್ 2023ರ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಘೋಷಣೆ ಮಾಡಿದೆ.
ಕೆಕೆಆರ್ ತಂಡಕ್ಕೆ ನಿತೀಶ್ ರಾಣಾರನ್ನು ನಾಯಕನನ್ನಾಗಿ ನೇಮಕ ಮಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಶ್ರೇಯಸ್ ಅಯ್ಯರ್ ಐಪಿಎಲ್‌ನಿಂದ ಹೊರಗುಳಿದ ಬಳಿಕ ತಂಡದಲ್ಲಿರುವ ಪ್ರಮುಖ ಆಲ್‌ರೌಂಡರ್ ಆಂಡ್ರೆ ರಸೆಲ್ ಅಥವಾ ಸುನಿಲ್ ನರೈನ್‌ಗೆ ನಾಯಕ ಸ್ಥಾನ ನೀಡುವ ಬಗ್ಗೆ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೆಕೆಆರ್ ಮಾತ್ರ ಯುವ ಆಟಗಾರನಿಗೆ ಮಣೆ ಹಾಕಿದೆ.
ಆಂಡ್ರೆ ರಸೆಲ್‌ಗೆ ನಾಯಕತ್ವ ನೀಡದಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಅವರು ಹಿರಿಯ ಆಟಗಾರ, ಹಲವು ವರ್ಷಗಳಿಂದ ಅವರು ತಂಡಕ್ಕಾಗಿ ಆಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಕೊಡುಗೆ ನೀಡುತ್ತಾರೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಅವರಿಗೆ ಅಪಾರ ಅನುಭವ ಇದೆ. ಇದನ್ನು ಪರಿಗಣಿಸಿ ಅವರಿಗೆ ನಾಯಕತ್ವ ನೀಡಬೇಕಿತ್ತು ಎಂದು ವಾದ ಮಾಡಿದ್ದಾರೆ.

ನಿರ್ಧಾರ ಸರಿ ಇದೆ ಎಂದ ಮತ್ತಷ್ಟು ಅಭಿಮಾನಿಗಳು
ಕೆಲವು ಅಭಿಮಾನಿಗಳು ಆಂಡ್ರೆ ರಸೆಲ್‌ಗೆ ನಾಯಕತ್ವ ನೀಡಬೇಕು ಎಂದು ಒತ್ತಾಯಿಸಿದರೆ ಮತ್ತೆ ಹಲವರು ನಿತೀಶ್ ರಾಣಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿರುವ ನಿರ್ಧಾರ ಸರಿ ಇದೆ ಎಂದು ಹೇಳಿದರು. ಆಂಡ್ರೆ ರಸೆಲ್ ಕೆಕೆಆರ್ ತಂಡದ ಪ್ರಮುಖ ಆಟಗಾರ. ಅವರ ಮೇಲೆ ನಾಯಕತ್ವದ ಹೊರೆಯನ್ನು ಹೇರದೆ ಇರುವುದು, ಅವರಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಉತ್ತಮ ಅವಕಾಶ ನೀಡಿದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಿತೀಶ್ ರಾಣಾ ಯುವ ಆಟಗಾರನಾಗಿದ್ದು ಭವಿಷ್ಯದಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೂಡ ತಂಡವನ್ನು ಮುನ್ನಡೆಸಲು ಅನುಭವ ಪಡೆದುಕೊಳ್ಳಲಿದ್ದಾರೆ. ಭವಿಷ್ಯದ ಯೋಜನೆಯನ್ನು ಪರಿಗಣಿಸಿ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಶ್ರೇಯಸ್ ಅಯ್ಯರ್ ದ್ವಿತೀಯಾರ್ಧದ ಐಪಿಎಲ್ ಪಂದ್ಯಗಳಲ್ಲಿ ಆಡುತ್ತದೆ ಎಂದು ಕೆಕೆಆರ್ ವಿಶ್ವಾಸದಲ್ಲಿದೆ.
ನಿತೀಶ್ ರಾಣಾ ಅಲ್ಲಿಯವರೆಗೂ ಮಾತ್ರ ನಾಯಕರಾಗಿರಲಿದ್ದಾರೆ ಎಂದು ಅದು ಹೇಳಿದೆ. ನಿತೀಶ್ ರಾಣಾ ಇದುವರೆಗೂ ಐಪಿಎಲ್‌ನಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಎಡಗೈ ಬ್ಯಾಟರ್ ನಿತೀಶ್ ರಾಣಾ ಕೆಕೆಆರ್ ನ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ.

ಏಪ್ರಿಲ್ 1ರಂದು ಮೊದಲನೇ ಪಂದ್ಯ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಗೆಲುವು ಕಂಡಿದ್ದ ಕೆಕೆಆರ್, 8 ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದ್ದರು. 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಕೆಲವು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಲಿಟ್ಟನ್ ದಾಸ್ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿರುವುದು ತಂಡದ ಚಿಂತೆಗೆ ಕಾರಣವಾಗಿದೆ.
ಕೆಕೆಆರ್ ತಂಡ: ಶ್ರೇಯಸ್ ಅಯ್ಯರ್ (ಗಾಯಗೊಂಡವರು), ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಟಿಮ್ ಸೌಥಿ, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಆನ್ ಆರ್ ಚಕ್ರವರ್ತಿ, ಸಿಂಗ್, ಶಕೀಬ್ ಅಲ್ ಹಸನ್, ಎನ್. ಜಗದೀಸನ್, ವೈಭವ್ ಅರೋರಾ, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟ್ಟನ್ ದಾಸ್ ಮತ್ತು ಮನ್ದೀಪ್ ಸಿಂಗ್.