
16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳಿವೆ. ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಈ ಮೆಗಾ ಟೂರ್ನಿಯ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಮುಕ್ತಾಯವಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು ಅದಾದ ಬಳಿಕ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿರುವ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ. ಭಾರತದ ಓರ್ವ ಆಟಗಾರನ ಮೇಲೆ ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರೂ ಚಿತ್ತ ನೆಡಬೇಕು ಎಂದಿದ್ದಾರೆ ಹರ್ಭಜನ್ ಸಿಂಗ್. ಅಂದಹಾಗೆ ಹರ್ಭಜನ್ ಸಿಂಗ್ ಹೇಳಿರುವ ಆ ಆಟಗಾರ ಬೇರೆ ಯಾರೂ ಅಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಬಗ್ಗೆ.
2023ರ ಐಪಿಎಲ್ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ವಿಶೇಷ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ ಹರ್ಭಜನ್ ಸಿಂಗ್. ರವೀಂದ್ರ ಜಡೇಜಾ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿರುವ ಅನುಭವ ಹೊಂದಿರುವ ಹರ್ಭಜನ್ ಸಿಂಗ್ ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ರವೀಂದ್ರ ಜಡೇಜಾ ಎಂದು ಬಣ್ಣಿಸಿದ್ದು ಭಾರತದ ಕಂಡೀಶನ್‌ನಲ್ಲಿ ಅವರು ಅತ್ಯಂತ ಯಶಸ್ವಿ ಆಟಗಾರ ಎಂದಿದ್ದಾರೆ.
"ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರೂ ಚಿತ್ತ ನೆಡಬೇಕಾದ ಆಟಗಾರ ಎಂದರೆ ಅದು ರವೀಂದ್ರ ಜಡೇಜಾ. ವಿಶೇಷವಾಗಿ ಅವರು ಸಿಎಸ್‌ಕೆ ಪರವಾಗಿ ಯಾವ ರೀತಿಯಾಗಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ನೋಡಬೇಕು. ಅವರು ಸ್ವಲ್ಪ ಮೇಲಿನ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದ್ದು ನಾಲ್ಕು ಓವರ್‌ಗಳ ಬೌಲಿಂಗ್ ದಾಳಿ ಕೂಡ ನಡೆಸಲಿದ್ದಾರೆ" ಎಂದಿದ್ದಾರೆ ಹರ್ಭಜನ್ ಸಿಂಗ್. ಸ್ಟಾರ್ ಸ್ಟೋರ್ಟ್ಸ್‌ಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಹರ್ಭಜನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
"ವಿಶ್ವ ಮಟ್ಟದಲ್ಲಿ ನೋಡಿದರೂ ಕೂಡ ರವೀಂದ್ರ ಜಡೇಜಾ ಅವರಿಗಿಂತ ಉತ್ತಮ ಆಲ್‌ರೌಂಡರ್ ಇದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಹಾಗಾಗಿ ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ಪ್ರದರ್ಶನ ನೋಡಲು ನಾನು ಎದುರು ನೋಡುತ್ತಿದ್ದೇನೆ. ಭಾರತದ ಕಂಡೀಶನ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅವರು ಅತ್ಯಂತ ಯಶಸ್ವಿ ಆಟಗಾರ" ಎಂದಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕವಾದ ರವೀಂದ್ರ ಜಡೇಜಾ ಆ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಈ ಅವಧಿಯಲ್ಲಿ ತಂಡದಲ್ಲಿ ಸಾಕಷ್ಟು ಗೊಂದಲಕಾರಿ ವಾತಾವರಣಕೂಡ ಉಂಟಾಗಿ ಬಳಿಕ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಸಿಎಸ್‌ಕೆ ತಂಡ ಕೂಡ ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ 9ನೇ ಸ್ಥಾನವನ್ನು ಪಡೆದು ಆವೃತ್ತಿಯನ್ನು ಅಂತ್ಯಗೊಳಿಸಿತ್ತು.