ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅನೇಕ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದು ಹೊಸತೇನಲ್ಲ. ಈ ಬಾರಿಯ ಐಪಿಎಲ್‌ನಲ್ಲಿಯೂ ಕೆಲ ಯುವ ಆಟಗಾರರು ಅಂಥಾದ್ದೇ ಭರವಸೆಯ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಓರ್ವ ಆಟಗಾರರ ನೀಡುತ್ತಿರುವ ಸ್ಥಿರ ಪ್ರದರ್ಶನ ದಿಗ್ಗಜ ಆಟಗಾರರನ್ನೇ ಅಚ್ಚರಿಗೆ ಒಳಪಡಿಸಿದೆ. ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಈ ಯುವ ಆಟಗಾರನ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದು ಈತ ಶೀಘ್ರದಲ್ಲಿಯೇ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ಹರ್ಭಜನ್ ಸಿಂಗ್ ಭವಿಷ್ಯ ನುಡಿದಿರುವ ಆ ಯುವ ಆಟಗಾರ ಬೇರೆ ಯಾರೂ ಅಲ್ಲ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ರಿಂಕು ಸಿಂಗ್. ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ರಿಂಕು ಸಿಂಗ್ ಬಗ್ಗೆ ಸಾಕಷ್ಟು ದಿಗ್ಗಜ ಆಟಗಾರರು ಭರವಸೆಯ ಮಾತುಗಳನ್ನು ಆಡಿದ್ದಾರೆ. ಹರ್ಭಜನ್ ಸಿಂಗ್ ಪ್ರಕಾರ ರಿಂಕು ಸಿಂಗ್‌ಗೆ ಶೀಘ್ರದಲ್ಲಿಯೇ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಯುವ ಆಟಗಾರ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಸತತವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ನಡೆದ ಕಳೆದ ಪಂದ್ಯದಲ್ಲಿಯೂ ರಿಂಕು ಸಿಂಗ್ ಅರ್ಶ್‌ದೀಪ್ ಸಿಂಗ್ ಎಸೆದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವು ಸಾರಿದ್ದರು. 11 ಪಂದ್ಯಗಳಲ್ಲಿ ರಿಂಕು ಕೆಕೆಆರ್ ಪರವಾಗಿ 337 ರನ್ ಬಾರಿಸಿದ್ದು 56.17ರ ಸರಾಸರಿಯನ್ನು ಹೊಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಪಂದ್ಯಕ್ಕೂ ಮುನ್ನ ಹರ್ಭಜನ್ ಸಿಂಗ್ ಮಾತನಾಡಿದ್ದು ರಿಂಕು ಸಿಂಗ್ ಪರವಾಗಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಕೆಕೆಆರ್ ತಂಡದಲ್ಲಿದ್ದಾಗ ರಿಂಕು ಸಿಂಗ್ ಜೊತೆಗೆ ಆಡಿರುವ ಹರ್ಭಜನ್ ಸಿಂಗ್ ಯುವ ಆಟಗಾರ ಭಾರತ ತಂಡದಲ್ಲಿ ಸ್ಥಾನವನ್ನು ಗಳಿಲು ಹೆಚ್ಚು ಸಮಯ ಬೇಕಿಲ್ಲ ಎಂದಿದ್ದಾರೆ.
"ರಿಂಕು ಸಿಂಗ್ ಶೀಘ್ರದಲ್ಲಿಯೇ ಭಾರತ ತಂಡದ ಕ್ಯಾಪ್ ತೊಡಲಿದ್ದಾರೆ. ಆತ ನಿಜಕ್ಕೂ ಸ್ಪೂರ್ತಿದಾಯಕ ಆಟಗಾರ. ಆತ ಬಹಳ ಕಠಿಣ ಹಾದಿಯನ್ನು ಸವೆಸಿದ್ದು ಇಂದಿನ ಈ ಸ್ಥಿತಿಗೆ ತಲುಪಲು ಬಹಳ ಕಠಿಣ ಪರಿಶ್ರಮಪಟ್ಟಿದ್ದಾರೆ. ಆತನಿಗೆ ತನ್ನ ಮೇಲಿನ ನಂಬಿಕೆಗೆ ಆತನೇ ಕಾರಣ. ಆತನ ಪ್ರಯಾಣ ನಿಜಕ್ಕೂ ಪಾಠ. ಎಲ್ಲಾ ಯುವ ಆಟಗಾರರು ಈತನಿಂದ ಕಲಿಯಬೇಕು" ಎಂದಿದ್ದಾರೆ ಹರ್ಭಜನ್ ಸಿಂಗ್.
KKR vs RR: ಪ್ಲೇಆಫ್ ಹಾದಿ ಸುಗಮಗೊಳಿಸಲು ಮತ್ತೆರಡು ತಂಡಗಳ ಸೆಣೆಸಾಟ
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ರಿಂಕು ಸಿಂಗ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ರಿಂಕು ಸಿಂಗ್ ಅವರು ಅದ್ಭುತ ಪ್ರಬುದ್ಧತೆ ಹೊಂದಿದ್ದಾರೆ. ಅವರ ಫೂಟ್‌ವರ್ಕ್ ಉತ್ತಮವಾಗಿದ್ದು ಸ್ಟ್ರೇಕನ್ನು ಕೂಡ ಉತ್ತಮವಾಗಿ ಬದಲಾಯಿಸುತ್ತಾರೆ. ಅವರು ಇರುವ ಫಾರ್ಮ್‌ಅನ್ನು ಉತ್ತಮ ಪ್ರದರ್ಶನವಾಗಿ ಬದಲಾಯಿಸುವುದು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಅಲ್ಲದೆ ಯಾವಾಗ ಗೇರ್ ಬದಲಾಯಿಸಬೇಕು ಎಂಬ ಅರಿವು ಕೂಡ ಅವರಲ್ಲಿ ಉತ್ತಮವಾಗಿದೆ. ದೊಡ್ಡ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯವೂ ಅವರಲ್ಲಿದೆ" ಎಂದಿದ್ದಾರೆ ಮೊಹಮ್ಮದ್ ಕೈಫ್.
ಗುರುವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣೆಸಾಡಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ಎರಡು ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಸೋತ ತಂಡ ಪ್ಲೇಆಫ್ ರೇಸ್‌ನಲ್ಲಿ ಹಿಂದುಳಿಯುವುದು ನಿಶ್ಚಿತ.