IPL 2023: ಎಲ್ಲವೂ ವಿಧಿಲಿಖಿತ; ಚೆನ್ನೈ ವಿರುದ್ಧದ ಫೈನಲ್ ಸೋಲಿಗೆ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ

ನಿನ್ನೆ ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದೆ.
ವಿಪರೀತ ಮಳೆ ಬಂದ ಕಾರಣ ರದ್ದಾಗಿ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿದ್ದ ಈ ಪಂದ್ಯಕ್ಕೂ ಮಳೆ ಅಡ್ಡಿಯುಂಟಾಗಿ 20 ಓವರ್‌ಗಳ ಪಂದ್ಯ 15 ಓವರ್‌ಗೆ ಕುಸಿತ ಕಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಮಳೆಯ ಕಾರಣದಿಂದಾಗಿ 15 ಓವರ್‌ಗಳಿಗೆ ಪಂದ್ಯ ಕುಸಿದು ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವನ್ನು ಕಂಡಿತು.
ಹೀಗೆ ಅಂತಿಮ ಎಸೆತದವರೆಗೂ ಗೆಲುವಿನ ಭರವಸೆ ಹೊಂದಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ಶಾಕ್ ನೀಡಿದ್ರು. ಅಂತಿಮ ಎರಡು ಎಸೆತಗಳಿಗೆ ಗೆಲ್ಲಲು 10 ರನ್ ಬಾರಿಸಬೇಕಿದ್ದಾಗ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿಯನ್ನು ಚಚ್ಚಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಆಗುವಂತೆ ಮಾಡಿದರು.
ಹೀಗೆ ಗೆಲುವಿನ ಸನಿಹಕ್ಕೆ ಬಂದು ಸೋತ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ. ನಮ್ಮ ತಂಡ ಸಂಪೂರ್ಣ ಶ್ರಮವನ್ನು ಹಾಕಿ ಪಂದ್ಯವನ್ನು ಆಡಿತು. ನಾವು ಹೋರಾಡಿದ ರೀತಿಯ ಬಗ್ಗೆ ಹೆಮ್ಮೆ ಇದೆ. ನಮ್ಮ ತಂಡದ್ದು ಒಂದು ಗುರಿ ಇದೆ. ನಾವು ಒಟ್ಟಿಗೆ ಗೆಲ್ಲುತ್ತೇವೆ, ಒಟ್ಟಿಗೆ ಸೋಲುತ್ತೇವೆ. ಚೆನ್ನೈ ಸೂಪರ್ ಕಿಂಗ್ಸ್ ನಮಗಿಂತ ಉತ್ತಮ ಕ್ರಿಕೆಟ್ ಆಡಿದೆ. ನಾವು ಚೆನ್ನಾಗಿ ಬ್ಯಾಟಿಂಗ್ ಆಡಿದೆವು, ವಿಶೇಷವಾಗಿ ಸಾಯಿ ಸುದರ್ಶನ್, ಇಂತಹ ಘಟ್ಟದಲ್ಲಿ ಈ ರೀತಿ ಆಡುವುದು ಸುಲಭವಲ್ಲ. ಯುವ ಆಟಗಾರರಿಂದ ಏನನ್ನು ಹೊರತೆಗೆಯಬೇಕೋ ಅದಕ್ಕೆ ಬೆಂಬಲವನ್ನು ನೀಡಿದ್ದೇವೆ. ಆದರೆ ಸಕ್ಸಸ್ ಅವರದ್ದೇ. ಮೋಹಿತ್ ಶರ್ಮಾ, ಶಮಿ ಹಾಗೂ ರಶೀದ್ ಖಾನ್ ಸೇರಿದಂತೆ ತಂಡದ ಎಲ್ಲರೂ ಉತ್ತಮವಾಗಿ ಪ್ರದರ್ಶನ ನೀಡಿದರು ಎಂದು ಹಾರ್ದಿಕ್ ಪಾಂಡ್ಯ ತಮ್ಮ ತಂಡ ಫೈಟ್ ನೀಡಿತು ಎಂದು ತಿಳಿಸಿದರು.
ಇನ್ನೂ ಮುಂದುವರಿದು ಎಂಎಸ್ ಧೋನಿ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ ಧೋನಿ ಬಗ್ಗೆ ಸಂತಸವಾಗುತ್ತಿದೆ, ಇದೆಲ್ಲಾ ವಿಧಿಲಿಖಿತ. ನಾನು ಸೋಲಬೇಕು ಎಂದಿದ್ದರೆ, ಧೋನಿ ಎದುರು ಸೋಲಲು ಇಚ್ಛಿಸುತ್ತೇನೆ. ಒಳ್ಳೆ ಜನರಿಗೆ ಒಳ್ಳೆಯದ್ದೇ ಜರುಗುತ್ತದೆ ಹಾಗೂ ನನಗೆ ತಿಳಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಅವರೂ ಒಬ್ಬರು ಎಂದು ಹೇಳಿ ಧೋನಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications